ದಯಾನಿದಿsಯ ಅಸಲು ಹೆಸರು ಕೊಂಡಪಲ್ಲಿ ವಜ್ಜರಯ್ಯನು. ಮರಣದಂಡನೆಯ ಯಿದಿsಸುವುದರಲ್ಲಿ ಗೋಲ್ಕೊಂಡದ ಅಲಿ ಕುತುಬ್ಷಾನ ಕಯ್ಯಿಯಿಂದ ತರಬೇತು ಪಡಕೊಂಡಿದ್ದನು. ಅಕ್ಕಿ ರಾಜಪಲ್ಲೆಯ ಜಮೀಂದಾರು ಪದುಮನಾಭ ನಾಯುಡು ತಾನು ಕೊಲೆಯಾಗುವ ವಂದರಗಳಿಗೆ ಪುರ್ವದಲ್ಲಿ ತನ್ನ ಕೊಲೆಗಡುಕನಾದ ವಜ್ಜರಯ್ಯಗೆ ದಯಾನಿಧಿಯಂದು ಪುನರ್ ನಾಮಕರಣ ಮಾಡಿ ಅಸುನೀಗಿದ್ದನು. ಅವನೆದೆಯೊಳಗ ತಿಲಗಾತುರದಷ್ಟಾದರೂ ಕರುಣೆಯಿಲ್ಲ ಯಂಬುದನ್ನು ಪರಿಸೋಧನೆ ಮಾಡಿದ ನಂತರವೇ ಅವುಕಿನ ಹಾರ್ವರ್ಡನ ಸಿಫಾರಸ್ಸಿನಿಂದಾಗಿ ಕುಂಪಣಿ ಸರಕಾರವು ಅವನಿಗೆ ಪ್ರಥಮ ದರ್ಜೆಯ ಕೊಲೆಗಡುಕನ ಸ್ಥಾನ ಮಾನ ನೀಡಿ ಯಿಟ್ಟುಕೊಂಡಿತ್ತು.. ಬ್ರೆಮ್ಮಾಸ್ತರ ಸೊರೂಪೀ ತೀಕ್ಷ್ಣ ನೋಟ ಮಾತ್ರದಿಂದ ಅಪರಾಧಿಯ ಅರ್ಧ ಪ್ರಾಣ ತೆಗೆಯಬಲ್ಲಂಥವನಾದ ಅವನು ಸದರಿ ಪಟ್ಟಣ ಸೇರಿಕೊಂಡದ್ದು ಯರಡು ದಿನಗಳ ಹಿಂದೆಯೇ.. ಯಂದಿನಂತೆ ರೆಡ್ಡಿಯ ಪುರುವಾಪರ ತಿಳಿದುಕೊಂಡು ‘‘ಅಯ್ಯೋ ಯಿಧಿಯೇ, ಅನ್ಯಾಯವರ್ತು ಸರಕಾರವು ತನ್ನಿಂದ ಕೊಲೆ ಮಾಡಿಸುತ್ತಿರುವುದು’’ ಯಂದುಕೊಂಡ. ಆದರೇನು ಮಾಡುವುದು? ಯಿದು ತನ್ನ ಕಸುಬು. ಬದುಕಿರುವಾಗಲೇ ಪುರಾಣ ಪದವಿಯನ್ನಲಂಕರಿಸಿರುವ ರೆಡ್ಡಿಯನ್ನು ತಾನು ಕೊಲ್ಲಬೇಕಿರುವುದಿಲ್ಲಾ!.. ಸಾವಿರ ಕೊಲೆ ಯಿಂದೊದಗುವ ಪಾಪವು ಕೇವಲ ಯೀ ವಂದು ಕೊಲೆಯಿಂದಲೇ ಲಭ್ಯವಾಗುತ್ತಿರುವುದಲ್ಲಾ.. ತಾನೀ ಕಸುಬಿಗೆ ಯಾಕ ಅಂಟಿಕೊಂಡೆನೋ?
ಬಂದೋಬಸ್ತಿನ ನಡುವೆ ಹೋಗುತ್ತಿದ್ದ ತನ್ನನ್ನು ನೋಡಿದವರು ತನ್ನನ್ನು ತುಂಬಿದ ಕೊಡಕ್ಕೆ ಹೋಲಿಕೆ ಮಾಡಿದ್ದುಂಟು.. ಅನ್ವರ್ಥನಾಮವು ಯಂದುಕೊಂಡದ್ದುಂಟು.. ಕೊಲ್ಲೋದು ಕೊಂದೇ ಕೊಲ್ತಿದ್ದೀಯಾ! ಆದರ ರೆಡ್ಡಿಯ ಮನಸ್ಸಿಗೆ ನೋವನ್ನುಂಟುಮಾಡದಂಗ ಕೊಲ್ಲು ಯಂದು ಕಣ್ಣಂಚಲ್ಲೇ ಬೇಡಿಕೊಳ್ಳುತ್ತಿದ್ದುದುಂಟು....
ನಿಲುವಂಗಿ ವುಡುಸಿಕೊಂಡು ಬಂದು ರೆಡ್ಡಿಯನ್ನು ತನ್ನ ಮುಂದ ನಿಲ್ಲಿಸಿದರು. ಮೊಟ್ಟಮೊದಲ ಸಲ ತಲೆಯೆತ್ತಿ ನೋಡಿದ್ದು ಆಗಲೇ.. ಹೆಂಗವನಲ್ಲ ಪುಣ್ಯಾತುಮ? ಯೀವಯ್ಯ ಭೀಮಲಿಂಗೇಸ್ವರ ಸ್ವಾಮಿಯ ವರಪ್ರಸಾದವೇ ಸಯ್ಯಿ. ಕಣ್ಣೊಳಗ ರವ್ವಂತಾದರೂ ಭಯವಾ!.. ಮುಖದೊಳಗ ರವ್ವಂತಾದರೂ ಅಳುಕss ತುಂಟಿ ನಡುವೆ ನಂದಾದೀವಿಗೆ ಹಚ್ಚಿದ್ದು ಹಚ್ಚಿದಂಗೇ ಯಿರುವುದು,