ವಾಕ್ಯದಿಂದ ಅರ್ಥ ಬ್ಯಾರೆ ಆಗೋದಯ್ತೆ ಕೇಕಕಣss..
ಮುಂಡದಿಂದ ರುಂಡ ಬ್ಯಾರೆ ಆಗೋದಯ್ತೆ ಕೇಕಕಣss..
ಯಂದು ಮುಂತಾಗಿ ಚವುಡಿಗಳು ತನ್ನೊಳಗ ಹಾಡಿಪಾಡಿ ಕೇಕೆ ಹಾಕುತಲಿದ್ದುದು ತನಗ ಹೆಂಗ ಅರ್ಥವಾದೀತು....
ಅಗೋ! ಅಲ್ಲಿ! ಆಕೇನೇ ಜಗಲೂರೆವ್ವ! ಯೀಗೋ ಯಿಲ್ಲಿ ಯೀಕೇನೇ ಜಗಲೂರೆವ್ವ ಯಂದನಕಂತ ಮಂದಿ ತನ ಸುತ್ತಮುತ್ತ ಜಮಾವಣೆಗೊಳ್ಳುತಲಿದ್ದುದು ತನಗ ಹೆಂಗ ಅರ್ಥವಾದೀತು? ಸೂರ್ಯ ಪರಮಾತುಮನು ಮಮ್ಮಲನೆ, ವಾಯುದೇವನು ಮಮ್ಮಲನೆ.. ಕ್ರಿಮಿಕೀಟಗಳು ಮಮ್ಮಲನೆ, ರುತುಮಾನಗಳು ಮಮ್ಮಲನೆ.. ಹಿಂಗs ಯಾವತ್ತು ತ್ರುಣ ಕಾಷವಿ ಯಿರುವೆ ಯಂಭತ್ನಾಕು ಕೋಟಿ ಜೀವರಾಶಿಗಳು ಮಮ್ಮಲನೆ ಮರುಗುತಲಿದ್ದುದು ತನಗೆ ಹೆಂಗ ಅರ್ಥವಾದೀತು? ಅಗೋ ಆಟು ದೂರದಲ್ಲಿ ಬಾಯಿ ಮುಕ್ಕಳಿಸಿ ನೀರು ವುಗುಳೋಮೋಟು ದೂರದಲ್ಲಿ.. ವಬ್ಬಾಕಿ.. ಆಕೆ ಯಾರಿದ್ದಾಳಪ್ಪಾ ಅಂದರ ಕಳ್ಳಬುಳ್ಳವ್ವನ ಸೊಸೆ ದೇಯೀರಮ್ಮ. ಜಗಲೂರೆವ್ವ ಮಾಡಿದ್ದ ಅಡವಣಿಗೆಯಿಂದಾಗಿ ಸತ್ತು ಹುಟ್ಟಿದ್ದಂಥವಳು. ತನಗ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ.. ತನ್ನ ಘಟ ಬಿದ್ದುಹೋದರೂ ಚಿಂತೆಯಿಲ್ಲ, ತಾನು ಯಿದ್ದದ್ದು ಯಿದ್ದಂಗ ಹೇಳುವಾಕೆಯೇ ಸಯ್ಯಿ.. ಯಂದನಕಂತ ಹಿಡಿಯ ಬಂದವರಿಂದ ಕೊಸರಿಕೊಂಡು ಮೋಡೋಡಿ ಬರುತಾಳs.. ಬಂದು ಯವ್ವಾ ಯಂದು ಯಿನ್ನೇನು ಬಾಯಿ ತೆಗೆಯಬೇಕೆಂಬುವಷ್ಟರಲ್ಲಿ.. ನಾಲಗೆ ಸಡನ್ನ ಬಿದ್ದುಹೋತು ಸಿವನೇ...
ಮಲಗಿದ್ದಲ್ಲಿಂದ ಜಗ್ಗಿಸಿ ನಿಂತೇಟಿಗೆ ಕಾಪಲಿದ್ದ ತೊಣಸಯ್ಯಾ, ಯರ್ರಯ್ಯಾ, ಮುಗುಲಯ್ಯಾ, ಚಿತ್ತಾರಯ್ಯರು ಆಟು ದೂರ ವುರುಳಿಕೋತ ಹೋದರು. ಬಡಗಿಗಳನ್ನೆತ್ತಲಕ ಕಯ್ಯಿ ಯೇಳಲೊಲ್ಲದು.. ದುರುಗುಟ್ಟಿ ನೋಡಲಕ ತಮ್ಮ ಕಣ್ಣುಗಳು ಸಹಕರಿಸಲೊಲ್ಲವು.. ಬಯ್ಯಲಕಂದರ ತಮ ತಮ್ಮ ನಾಲಗೆಗಳು ಸಹಕರಿಸಲೊಲ್ಲವು.. ಯಾಕ ಹಿಂಗ ತಮ ತಮ್ಮ ಸರೀರಗಳು ವುಡುಗಲಕ ಹತ್ತ್ಯಾವ.. ಅವರಿಗೆ ಘಜೀತಿಗಿಟ್ಟುಕೊಂಡು ಬಿಟ್ಟಿತ್ತು. ವಂದರಗಳಿಗೆ ಹಿಂದ ಯಿದ್ದಂಗ ಯೀಗ ಯಿಲ್ಲ ಅವರು.. ಯಿಂಥ ಮಹಿಮಾನ್ವಿತ ಮಹಿಷವನ್ನು ಹೊಡದು ಬಡದು ಪಳಗಿಸಲಂಕತ ಯೀಳ್ಳೆ ಪಡೆದು ಬಂದಿದ್ದೇವಲ್ಲಾ ತಾವು! ತಮ್ಮ ಬುದ್ದಿ ಯೇನು ತಿಂದಿತ್ತು ಆವಾಗ.. ಆ ನಾಕೂ ಮಂದೀನೂ ತಮ್ಮ ನಿಯಾಮಕದ ಮೂಲ ವುದ್ದೇಶವನ್ನು ಬದಿಗಿಟ್ಟು ಅದರ ಯದುರು ಪಿಳಿ