ಕಲತುಕೊಂಡು ಸಮುದ್ರಯಾನ ಮಾಡಿ ಯಿಲ್ಲಿಗೆ ನಾವೇ ಬಂದಿರುವಾಗ ನೀವ್ಯಾಕ ಯಿದನು ಕಲಿತು ಸಮಂದರ ಯಾನ ಮಾಡಬಾರದು ಕನರಯ್ಯಾ.. ಯಂದವಯ್ಯ ತಾನು ಹೋದಲ್ಲಿ, ಬಂದಲ್ಲಿ ಮನವರಿಕೆ ಮಾಡಲಾರಂಬಿsಸಿದಂದಿನಿಂದ....
ಸದರಿ ಪ್ರಾಂತದ ಅಗ್ರಹಾರಗಳನ್ನು ಕುಂಪಣಿ ಸರಕಾರವು ಯಿಂಗ್ಲೀಷು ಕಲಿಸಲಕ ದತ್ತಕ ತಗೊಂತು. ದೇವುಳಗಳ ಸುತಮುತ್ತ, ಅಸುವತ್ಥ ಮರಗಳ ಮಯ್ಯಿ ಮ್ಯಾಲೆಲ್ಲ ಹ್ಯಾಟು ಬೂಟು ಧರಿಸಿರುವವರ ತಯ್ಲವರ್ಣ ಪಟಗಳನ್ನು ತೂಗುಬಿಡಲಾಯಿತು. ಯಿಂಗ್ಲೀಷ್ ಭಾಷೆ ಕಲಿಯಿರಿ.. ಪಗಾರ ಯಣಕೆ ಮಾಡಿಕೊಳ್ಳಿರಿ.. ಯಿಂಗ್ಲೀಷ್ ಕಲಿಯಿರಿ ಹಡಗನ್ನು ಹತ್ತಿರಿ.. ಯಿಂಗ್ಲೀಷು ಯಂಬ ಕನ್ನಡಕ ಧರಿಸಿರಿ.. ಯಿಶಾಲ ಪ್ರಪಂಚ ನೋಡಿರಿ ಯಂಬ ಪ್ರಚಾರ ವಾಕ್ಯಗಳನ್ನು ವಯ್ದಿಕರ, ಪುರೋಹಿತರ, ಜೋಯಿಸರ, ಯೇದ ಪಾರಂಗತರ ನಿವಾಸಗಳ ಗೋಡೆ ಗೋಡೆ ಮ್ಯಾಲ.. ತುಳುಸಿಕಟ್ಟೆಗಳ ಮ್ಯಾಲ ರಾತಿರೋ ರಾತಿರಿ ಬರೆಯಿಸಲಾಯಿತು.. ಹ್ಯಾಟು, ಬೂಟು, ಸೂಟು, ಟಯ್ಯಿಗಳನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿಗಳನ್ನು ಪ್ರತಿಯೊಂದು ಅಗ್ರಹಾರದಲ್ಲಿ ತೆರೆಯಲಾಯಿತು. ಸರಕಾರದ ಯೀ ಕ್ರಮದಿಂದಾಗಿ ಅಗ್ರಹಾರಗಳು ರಾಮ ರಾಮ ಯಂದು ತಲೆ ಮ್ಯಾಲ ಕಯ್ನ ಯಿಟ್ಟುಕೊಂಡವು.. ನಾರಾಯಣss ಯನ್ನುತ್ತ ನಿಟ್ಟುಸುರು ಬಿಡಲಾರಂಭಿಸಿದವು..ಕನ್ನಡ, ತೆಲುಗು, ಅರವಗಳಂಥ ಭಾಷೆಗಳನ್ನು ಕಲಿತರೇನೆ ನರಕ ಪ್ರಾಪ್ತಿಯಾಗುತ್ತದೆ.. ಯಿನ್ನು ಯಿಂಗ್ಲೀಷಿನಂಥ ಯಿಲಾಯಿತಿ ಭಾಷೆಯನ್ನು ಕಲಿತರೆ ಯಂಥ ನರಕ ಪ್ರಾಪ್ತವಾಗುವುದೋ ಯಂದು ಯಿಲಯಿಲಾಂತ ವದ್ದಾಡ ಲಾರಂಭಿಸಿದವು... ಗರುಡ, ಗಂಧವತ, ದಧೀಚ, ಧ್ಯಾನಕಾಷವಿ, ಬಾಲದಿs, ಬಡಬಾಗ್ನಿ, ಪ್ರಭಾಸ, ಮೋಕ್ಷ ಯಂಬಿವೇ ಮೊದಲಾದ ಅಗ್ರಹಾರಗಳು, ಸರಕಾರದ ಯೀ ಕ್ರುತ್ಯ ಅನಯ್ತಿಕ ಯಂದೂ, ಹಿಂದೂ ಧರುಮದ ಮ್ಯಾಲ ನಡೆಸಲಿರುವ ಪ್ರಹಾರ ಯಂದೂ ಬಣ್ಣಿಸಲಾರಂಭಿಸಿದವು.. ಅಣಿ ಮಾಂಡವ್ಯಮಾಚಾರ್ಯರ ನೇತ್ರುತ್ವದಲ್ಲಿ ಯುಯುಧನಮಾಚಾರ್ಯ, ರಾಮಹ್ರದಮಾಚಾರ್ಯ, ರಾಷ್ಟ್ರವರ್ಧನಮಾಚಾರ್ಯ, ಲೋಮಶಾಚಾರ್ಯ, ಭಾರದ್ವಾಜಮಾಚಾರ್ಯರೇ ಮೊದಲಾದ ಯಿಬಿsನ್ನ ಅಗ್ರಹಾರಗಳ ಮುಖ್ಯಸ್ಥರು ವಗ್ಗೂಡಿದರು. ಅವರೆಲ್ಲ ಸಾಮಾನ್ಯರಾಗಿರಲಿಲ್ಲ.. ತಮ ತಮ್ಮ ನಾಲಗೆಗಳ ಮ್ಯಾಲ ಯೇದೋಪನಿಷತ್ ಪುರಾಣಗಳ ಭಂಡಾರವನ್ನೇ ಯಿಟ್ಟುಕೊಂಡಿರುವಂಥವರು.. ಅವರು ಯೇದೋಪನಿಷತ್ತು, ಸ್ಮೃತಿಗಳಲ್ಲಿ