ಮ್ಯಾಲೊಂದರಂತೆ ನಿಟ್ಟುಸುರು ಬಿಡುತ ಚಿಂತಾಕ್ರಾಂತನಾಗಿದ್ದನು. ಆತನು ತನ್ನ ಪಿಳ್ಳೆಯನ್ನು ಹರಾಳು, ಬರಾಳು, ತಿಂದರಾಳು, ಕುಡುದರಾಳು ಯಂಬಿವೇ ಮೊದಲಾದ ದೇಸ ಯಿದೇಸಗಳ ವೈದ್ಯರಿಗೆ ತೋರಿಸಿದ್ದು ಫಲಕಾರಿಯಾಗಿರಲಿಲ್ಲ.. ನಾನಾ ನಮೂನಿ ಸಭ್ಯಸ್ಥ, ಅಸಭ್ಯಸ್ಥ ದೇವರು ದಿಂಡಿರುಗಳಿಗೆ ನಡಕೊಂಡದ್ದೂ ಫಲಕಾರಿಯಾಗಿರಲಿಲ್ಲ.. ರೋಸಿ ಹೋಗಿ ಆಕೆಯ ನಸೀಬದಲ್ಲಿದ್ದಂಗಾಯ್ತದೆ ಯಂದು ನಿರ್ದಾರ ಮಾಡಿ ಕಯ್ನ ಚೆಲ್ಲಿದ್ದನು. ಯೀಗ್ಗೆರಡು ದಿವಸಗಳಿಂದ ರೋಗ ವುಲ್ಬಣಗೊಂಡು ಕಂಕಾಳಿ ಬಲು ನಿತ್ರಾಣಳಾಗಿದ್ದಳು.. ಕೂಳು ಸೇರಿಕೆಯಿರಲಿಲ್ಲ.. ನೀರು ನಿಡಿ ಸೇರಿಕೆಯಿರಲಿಲ್ಲ.. ಮುಂದೇಸಿಂದ ಮಗಳೂ ಕಯ್ನ ಬಿಡಲಿರುವಳು, ಹಿಂದೇಸಿಂದ ಅಳಿಯನೂ ಕಯ್ನ ಬಿಡಲಿರುವನು. ಆಮ್ಯಾಲ ಭೂಮಿಗೆ ಭಾರವಾಗಿ ವುಳುಕೊಳ್ಳಲಿರುವುದು ತಾನೋರ್ವನೆ.. ತಾನ್ಯಾವ ಪುರುಷಾರ್ಥಕ್ಕ ಬದುಕಿರಬೇಕು.. ತಾನೂ ಸಿವನ ಪಾದ ಸೇರಿಕೊಂಡರಾಯಿತು.. ಅದೇ ಸಮಯಕ್ಕೆ ಸರಿಯಾಗಿ....
ಕುದುರೆಡವ ಮಾದಿಗರ ಪಯ್ಕಿ ಮೋರ್ವನಾದ ಯಾಕುಂದನು ಹಲಕುಂದನೊಂದಿಗೆ ಹೋಗಿ ಆ ಮನೆ ಯದುರು ನಿಂತು ‘ಭವತೀ ಭಿಕ್ಷಾಂದೇಹಿ’ಯಂದು ಕೂಗು ಹಾಕಿದನು. ಯಾರೋ ಬಿsಕ್ಷುಕರು ಬಂದವರಂತ ತಡಸಾಲವ್ವ ಮೊರದೊಳಗ ಜೋಳ ತಂದು ಜೋಳಿಗೆ ವಡ್ಡಿರಯ್ಯಾ ಅಂದಳು.. ಅದಕ್ಕವರು ದವಸ ಬ್ಯಾಡ ತಾಯೀ, ಧಾನ್ಯ ಬ್ಯಾಡ ತಾಯಿ ಅಂದರು. ಮತ್ತೇನು ಬಗಸುತೀರಯ್ಯಾ ಯಂದು ಕೇಳಿದಳು.. ಅದಕಿದ್ದು ಅವರು ನಾವು ಕುದುರೆಡವ ಸಾಂಬವಿ ಕಡೇರವ್ವಾ.. ತಾಯಿ ಕೋಣ ಬಗಸ್ಯಾಳ.. ಅದನು ಜೋಳಿಗೆಗೆ ಹಾಕಿ ಮೋಕ್ಷ ಪಡೀರವ್ವಾ ಯಂದರು.. ದಂಧಕ್ಕಿಯಲ್ಲಿದ್ದ ಹರೇದ ಕೋಣವು ವಯ್ಕ ವಯ್ಕ ಯಂಬ ಭಾಷೆಯಲ್ಲಿ ತನ್ನ ಯಿರುವನ್ನು ಸಾಬೀತುಪಡಿಸಿತು. ತಡಸಾಲವ್ವ “ಯೀ ಸೀಮೇಲಿ ವುಳುಕೊಂಡಿರುವುದು ಯಿದೊಂದೇ ಕ್ವಾಣ ಕನರಯ್ಯಾ.. ಯಿದನು ಕಳುವಿದಲ್ಲಿ ಸದರಿ ಸೀಮೆಯು ಹಾಲು ಹಯ್ನದಿಂದ ವಂಚಿತವಾಗುತಯ್ತೆ.. ಅದಕ್ಕ ಬದಲಾಗಿ ಯಿನ್ನೊಂದು ಮೊರ ಜ್ವಾಳ ನೀಡೇನು” ಯಂದು ಹೇಳಿದಳು.. ಅಲ್ಲೇ ಪಳುಗಟ್ಟೆ ಮ್ಯಾಲ ಯೀಗಲೋ ಆಗಲೋ ಅಂಬುತಲಿದ್ದ ಮಗಳ ಜೀವಚ್ಫವವನ್ನು ಯದುರಿಗೆ ಮಲಗಿಸಿಕೊಂಡು ರೋಧನ ಮಾಡುತಲಿದ್ದ ಅಳ್ಳಾಡೆಪ್ಪನು ನಮ್ಮದೇ ನಮಗ ಮಸ್ತಾಗಯ್ತಯ್ಯಾ.. ರಿಪಿ ರಿಪಿ ಮಾಡಿ ಹೊಟ್ಟೆ ವುರುಸಬೇಡಿರಯ್ಯಾ ಯಂದನಕಂತ ಕಯ್ನ ಮುಗುದು