ವಿಷಯಕ್ಕೆ ಹೋಗು

ಪುಟ:Aramane.pdf/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೊಟ್ಟೆ ಮುಚ್ಚಲಕ ಹೋದರೆ ಕುಂಡಿ ಕಾಣಿಸುತಲಿತ್ತು.. ಕುಂಡಿ ಮುಚ್ಚಲಕ ಹೋದರೆ ಹೊಟ್ಟೆ ಕಾಣಿಸುತಲಿತ್ತು ಸಿವನೇ.. ವುಂಬಲಕ ಯಿಲ್ಲಾ.. ತಿಂಬಲಕ ಯಿಲ್ಲಾ.. ವುಡುಲಕ ಯಿಲ್ಲಾ ಯಿಂಥ ದುಬಾರಿ ಯಾಳ್ಳೇದೊಳಗ ತಾಯಿ ಸಾಂಬವಿ ಹೊಳೆಗೆ ಹೊಂಡುತ್ತಿರುವಳಲ್ಲಾ.. ಹೆಡೆ ಮಾಡಲಕ ತಮ ಕಯ್ಯೊಳಗ ಯೇನೂ ಯಿಲ್ಲದಂಗಾಗಿರುವುದಲ್ಲಾ.. ಯಂದು ಯಸನ ಮಾಡುತ ಆ ಬಡಬಗ್ಗ ಮಂದಿ ಅರಮನೆಗೆ ಹೋಗಿ ‘ಅವ್ವಾ ತಾಯೀ.. ಹಬ್ಬ ಮಾಡಲಕ ಯೇನಾರ ಕೊಡವ್ವಾ’ ಯಂದು ಕೇಳಿದ್ದಕ್ಕೆ ಅರಮನೆಯವರು ‘‘ಯಿದು ಹೆಸರಿಗೆ ಮಾತ್ರಅರಮನೆ ಅಯ್ತೆ.. ಕೊಡಲಕಂದರ ಕಾಳಿಲ್ಲ.. ನೀಡಲಕಂದರ ನೀರಿಲ್ಲ’’ ಯಂದು ಹೇಳಿ ವಾಪಾಸು ಕಳುವುತಾವ ಸಿವನೇ.. ಅರಮನೇನ ವುಪಾಸ ವನುವಾಸ ಅನುಭವಿಸುತ್ತಿರುದೆಂದ ಮ್ಯಾಲ ಯಿನ್ನಾರನ್ನು ಕೇಳೋದು? ತಿರುಪಾಲಯ್ಯಸ್ರೇಷಿವಿ ದಾನ ದರುಮ ಮಾಡೀ ಮಾಡೀ ಕಯ್ಯಿಗೆ ದಣುವು ತಂದುಕೊಂಡವನೆ, ಗವುಡ, ರೆಡ್ಡಿ ಮಡ್ಡಿಯೇ ಮೊದಲಾದ ಧವುಳೇರು ಕೊಡಿರಿ ಯಂದರೆ ಯಲ್ಲಿಮಟ ಕೊಟ್ಟಾರು! ಬರಿಗಯ್ಲಿ ವಾಪಾಸಾದಂಥ ಬಡಬಗ್ಗ ಮಂದಿಯು ತಾಯಿ ಸಾಂಬವಿ ವಸ್ತಿ ಮಾಡಿದ್ದಂಥ ದಿಕ್ಕಿಗೆ ಅಡ್ಡಬಿದ್ದು “ಯವ್ವಾ ಜಗಾನುಮಾತೆಯೇ.. ನಿಂಗೆ ನಮ್ಮ ನಿಟ್ಟುಸುರೇ ಹೆಡೆ ಕನವ್ವಾ” ಯಂದು ನಿಷುವಿರದಿಂದ ಅರಕೆ ಮಾಡಿಕೊಂಡರು ಸಿವನೇ...

ಯಲ್ಲಿ ನೋಡಿದರಲ್ಲಿ ಮಾಯಿನ ತೋರಣಗಳೇನು? ಸಾರಣೆ ಕಾರಣೆ ಕಂಡಿದ್ದ ನೆಲಗಳೇನು? ಅವರ ಮನೆಯಂಗಳದಿಂದ ಯಿವರ ಮನೆ ಅಂಗಳಕೂ, ಯಿವರ ಮನೆಯಂಗಳದಿಂದ ಅವರ ಮನೆಯಂಗಳಕೂ ಪಯಿಪೋಟಿಯಿಂದ ಹೋಗಿ ಬರುತಲಿದ್ದ ರಂಗವಲ್ಲಿ ಚಿತ್ತಾರಗಳೇನು? ರುಮರುಮು ಅನ್ನುತ್ತಲಿದ್ದ ರುಮ್ಮಿಗಳೇನು? ಡೊಳ್ ಡೊಳ್ ಅನ್ನುತಲಿದ್ದ ಡೊಳ್ಳುಗಳೇನು? ಟಡ್ಡೆಣಕ್ಕು ಣಕ್ಕು ಣಕ್ಕು ಯಂದು ಸಪ್ಪಳ ಮಾಡುತಲಿದ್ದ ಹಲಗೆ ತಮ್ಮಟೆಗಳೇನು? ದಯ್ ದಯ್ ದದ್ದಿಯಂದು ಕುಣುದಾಡುತಲಿದ್ದ ಕೋಲಾಟಗಳೇನು? ಅವ್ವನ ಮಯ್ಮೆ, ಪವಾಡಗಳನ್ನು ಪೊಣಿಸಿದ್ದ ಹಾಡುಗಳೇನು? ನ್ರುತ್ಯಗಳೇನು? ಜನರನ್ನು ರಂಜಿಸುತಲಿದ್ದ ಬಗೆಬಗೆ ಯಾಸಗಳೇನು? ಹೋಬ್ಬ ಹೋಬ್ಬ ಯಂದು ಪಲ್ಲವಿ ಹಾಡುತಲಿದ್ದ ಬಗೆಬಗೆ ಯಿನ್ಯಾಸದ ಡೇಗುಗಳೇನು? ಸಿವ ಸಿವಾ ಅನುವಂಗಿತ್ತು ಆ ಪಟ್ಟಣದ ವಂದೊಂದು ದ್ರುಸ್ಯವು..

ಸೂರ್ಯಾಮನಿಗೆ ಆಕಾಸದಾಗ ಯೇನು ಕೆಲಸ ಬೊಗುಸೆಯಿದ್ದೀತು?