ವಿಷಯಕ್ಕೆ ಹೋಗು

ಪುಟ:Aramane.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋಡುತಯಿರಲಿಲ್ಲ, ಕೆಳಗಿದ್ದೋರು ಮ್ಯಾಲಿದ್ದೋರನು ನೋಡುತಯಿರಲಿಲ್ಲ.. ಹಿಂದಿದ್ದೋರು ಮುಂದಿದ್ದೋರನ್ನಾಗಲೀ, ಮುಂದಿದ್ದೋರು ಹಿಂದಿದ್ದೋರನ್ನಾಗಲೀ, ಯಡಕ್ಕಿದ್ದೋರು ಬಲಕ್ಕಿದ್ದೋರನ್ನಾಗಲೀ, ಬಲಕ್ಕಿದ್ದೋರು ಯಡಕ್ಕಿದ್ದೋರ ನ್ನಾಗಲೀ ಗಮನಿಕೆ ಮಾಡುತ ಯಿರಲಿಲ್ಲ.. ಅವರದ್ದೊಂದು ನಮೂನಿ ಮಟ್ಟಸ ಬದುಕಾಗಿತ್ತು....

ಅಂಥ ಬದುಕು ಹೆಪ್ಪುಗಟ್ಟಿ ಮಲೆತು ನಿಂತಿದ್ದ ಆ ಗ್ರಾಮವು ಪಟ್ಟಣದ ಪೋಷಾಕನ್ನು ಸದಾ ಧಾರಣ ಮಾಡಿರುತಲಿತ್ತು. ಕುಂತಳ ಪ್ರಾಂತ ಎಂಬುವ ಮಜ್ಜಿಗೆ ಗುಡಾಣದೊಳಗೆ ಬೆಣ್ಣೆವುಂಡೆಯಂಗೆ ತೇಲಾಡುತ್ತಲಿದ್ದ ಆ ಪಟ್ಟಣದೊಳಗೆ ಆ ಒಂದು ಚಣ ಯಾಪಾಟಿ ರುತುಮಾನ ಪರಪಾಟಾಯಿತೆಂದರೆ ಆ ದಿನ ವುದಿಸಿದ್ದೇ ವಯಶಾಖ ಜಾತಿಯ ಮದ್ಯಾಣದ ಸೂರ್ಯನು ಯೇರುತ ಯೇರುತ ಪ್ರತಿಯೊಬ್ಬರ, ಪ್ರತಿಯೊಂದರ ನೆತ್ತಿ ಮ್ಯಾಲಕ ಬಂದಾತನು ಧಗಧಗನೆ ಸುಡುತಲಿದ್ದ. ತನ್ನ ಬಿಸಿಲ ತೋಳುಗಳಿಂದ ಹೊರಗೆ ಆಡುತಲಿದ್ದ ಮಕ್ಕಳು ಮರಿಗಳನ್ನು, ಮಂದಿಯ ಕತ್ತುಗಳನು ಹಿಡಿದು ಅವರವರ ಮನೆವಳಗಡೆ ತಳ್ಳಿ ಹ್ಹಾ... ಹ್ಹೂ ಯಂದು ವುಸುರು ಬಿಡುವಂತೆ ಮಾಡಿದ. ಗಳಗ್ಗಳಿಗ್ಗೊಮ್ಮೆ ನೀರು ಕುಡಿಯುವಂತೆ ಮಾಡಿದ. ಸೆಖೆ ತಾಳಲಾರದೆ ಮಂದಿ ತನ್ನನ್ನು ಬಯ್ಯುವಂತೆ ಮಾಡಿದ. ಬಿಸಿಲ ಕೋಲುಗಳಿಂದ ವಬ್ಬೊಬ್ಬರನ್ನು ಬಡಿದು ಹಿಂಸಿಸಿದ. ನೂರಾರು ಬಿಸಿಲುಗುದುರೆಗಳನ್ನು ಬೀದಿ ಬೀದಿ ತುಂಬೆಲ್ಲ, ಬಯಲು ಬಯಲು ತುಂಬೆಲ್ಲ ಅಂಡಲೆಯುವಂತೆ ಮಾಡಿದ. ಇಡೀ ಸಮಸ್ತ ಪಟ್ಟಣವನ್ನು ತನ್ನ ಅಗಾಧವಾದ ಮ್ರುಗಜಲದಿಂದ ತೊಯ್ದು ತಪಟ್ಟೆಯಾಗುವಂತೆ ಮಾಡಿದ. ಬಿಸಿಲೆಂಬುವ ಚಕ್ರಾಧಿಪತ್ಯ ಸ್ಥಾಪಿಸಿ ಬಿಸಿ ಎಂಬ ಅಧಿಕಾರವನ್ನು ತಾನು ಚಲಾಯಿಸುತ್ತಿರುವಾಗ್ಗೆ, ಅಗಾಧವಾದ ಮವುನ ಬಿತ್ತಿ ಬೆಳೆಯುತ್ತಿರುವಾಗ್ಗೆ.. ಕೊರೆದ ಚಿತ್ರದಂತೆ ಪಟ್ಟಣ ಬಿಕೋ ಅನ್ನುತ್ತಿರುವಾಗ್ಗೆ.. ಥೆಳಗೇರಿಗಳಗೆಲ್ಲ, ಮಕುಟಪ್ರಾಯದಂತಿದ್ದ ಒಂದು ಥೆಳಗೇರಿಯ, ಕೆಮ್ಮಿದರೆ ವಂದು ಪುಟ್ಟಿ ಮಣ್ಣುವುದುರಿಸುತಲಿದ್ದ ವಂದು ಮನೆಯ ಅಂಗಳದಲ್ಲಿದ್ದ ವಂದು ಕಟ್ಟೆಯ ಮ್ಯಾಲ ಬಲಗಾಲನ್ನು ನೆಲಕ್ಕಿಳಿಬಿಟ್ಟು ಯಡಗಾಲ ಪಾದವನ್ನು ತೊಡೆ ಸಂದಿಗಂಟಿಸಿಕೊಂಡು, ಮೊಣಕಾಲ ಚಿಪ್ಪಿನ ಮ್ಯಾಲ ಬಲಗಯ್ಯನ್ನು ವುದ್ದೋಕೆ ಚಾಚಿ, ಯಡಗಯ್ಯನ್ನು ತಲೆಗಾನಿಸಿಕೊಂಡು ಬೀದಿಯ ತುದಿಯಲ್ಲಿ ಮೂಡಿ ಮರೆಯಾಗುತಲಿದ್ದ ಬಿಸಿಲಗುದುರೆಯತ್ತ ದ್ರುಸ್ಟಿ ಅಂಟಿಸಿ ವಡಲೊಳಗಿನ ನೀರು ಅಳ್ಳಾಡದಂಗೆ ಕೂಕಂಡಿದ್ದ....