ವಿಷಯಕ್ಕೆ ಹೋಗು

ಪುಟ:Aramane.pdf/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಬಲಿ ಅಂದರ ಸಾಮಾನ್ಯವಲ್ಲ.. ಅದರ ತೊಲ್ಡು ಬೀಜಗಳನ್ನು ಯಾವಾತನು ಸದಾ ತನ್ನ ಕೊರಳಲ್ಲಿ ಕಟ್ಟಿ ಕೊಂಡಿರುವನೋ ಅಂಥಾತನು ಸ್ತ್ರೀಸೌಖ್ಯವನ್ನು ಜೀವನ ಪರ್ಯಂತ ಅನುಭೋಸುವನು” ಯಂದು ಹೇಳಿದನು. ಅದರಿಂದ ಸಂತುಷ್ಟಗೊಂಡ ನಾಯಕನು “ಹಂಗಾದರೆ ಸರ್ರೆಸರ್ರೆ.. ಅವನು ತಂದು ಯಿದ್ಯುಕ್ತವಾಗಿ ಸನ್ನಿಧಾನಕ್ಕ ವಪ್ಪಿಸಬೇಕು. ಮಾತಿಗೆ ತಪ್ಪಿದಲ್ಲಿ ಯಿದ್ದೇಯಿದೆ” ಯಂದು ಹೇಳಿ ದಾರಿ ಖರ್ಚಿಗೆ ಕೊಟ್ಟು ಕಳುವಿದನು.

ಕಾಲುಮುಟ್ಟಲಕ ಹೋದರ ಕಾಲು ಕೊಸರಲಿಲ್ಲ, ಕೊಂಬು ಮುಟ್ಟಲಕ ಹೋದರ ಹಿರಿಹಿರಿ ಹಿರಿಯಲಕ ಬರಲಿಲ್ಲ. ಯಾವ ಪುಣ್ಯಾತುಮ ಅದೆಂಗ ಬೆಳೆಸಿರುವನೋ ಯಿದನು.. ಸಾದು ಸಂತರ ಪಯ್ಕಿ ಯಿರುವಂಗಯ್ತಲ್ಲಾ, ಯಿದರ ಹಿಂಗಾಲುಗಳ ನಡುವೆ ಸೋಭಾಯಮಾನವಾಗಿ ಜೋಡು ಯಿಷ್ಟಲಿಂಗಗಳೋಪಾದಿಯಲ್ಲಿ ತೊಲ್ಡು ಬೀಜಗಳು ಜೋತಾಡುತ್ತಿರುವವಲ್ಲ. ಹ್ಹಾ.. ಹ್ಹಾ.. ನಾಯಕಾss.. ಯಿವುಗಳನ್ನಲಂಕರಿಸಿಕೊಳ್ಳೋ ನಿನ್ನನ್ನು ನೋಡಲಕೊಂದು ಚಂದ.. ನಿನ್ನೊಡನೆ ಮಾತನಾಡಲಕೊಂದು ಚಂದ.. ಯಿನ್ನೊಂದೆರಡು ಮೂರು ದಿವಸಗಳಲ್ಲಿ ತಾನಿವನ್ನು ನೀಡುವ ಪುರುವದಲ್ಲಿ ಹೇರಳ ಪೊಗದಿ ವಸೂಲು ಮಾಡಬೇಕಯ್ತೆ. ವಕ್ಕಲು ಮಂದಿಯು ತನಗ ಬಲಗಾಲು ಬೇಕು, ತನಗ ಡುಬ್ಬ ಬೇಕು, ತನಗ ಹಿಂಗಾಲು ಬೇಕು, ತನಗೆ ಬಾಲ ಬೇಕು ಯಂದು ವಾದಾಡಿದರು. ಪುಣ್ಯಕ್ಕ ಮಾಬಲಿಯ ತೊಲ್ಡು ಬೀಜಗಳನ್ನು ಯಾರೂ ಬಗಸುತ್ತಿಲ್ಲ. ರಾಜರ ವೂಳಿಗದಲ್ಲಿರುವಾತ ಯಂಬ ಕಾರಣಕ್ಕೆ ಹಂಚುವ ಘನಕಾರ್ಯವನ್ನು ತನಗೆ ವಹಿಸಿದ್ದೂ ಸಾಂಬವಿಯ ಕರುಣೆಯೇ ಸರಿ.

ಸಿವನ್ನಾಮ ಪಾರೊತೀ ಪತಿ ಹರಹರ ಮಾದೇವss.. ಹತ್ತಾರು ವೂರುಗಳಿಂದ ತಾಯಿಯ ಸೇವಕ್ಕೆಂದೇ ಆಗಮಿಸಿದ್ದ ನೂರಾರು ಮಂದಿ ಪೋತರಾಜರುಗಳು ತಮ ತಮ್ಮ ಬಾಯಿಗಳಿಂದ ವಂದರಮ್ಯಾಲೊಂದಂತೆ ಆಡು, ಮೇಕೆಗಳನು ಜಿಗಿಜಿಗಿದು ರಾಸಿರಾಸಿ ಹಾಕುತಲಿದ್ದರು ವಂದುಕಡೇಕ.. ಸದರಿ ಬಯಲ ಹತ್ತಾರು ಕಡೇಲಕಿದ್ದ ಸೂಲಗಂಭಗಳನ್ನೇರುತಲಿದ್ದೋರು ಯಷ್ಟೋ ಮಂದಿ? ಸಿಡಿ ಆಡುತಲಿದ್ದೋರು ಯಷ್ಟೋ ಮಂದಿ? ಬಲಿಗೊಂಡು ಹೆಣವಾಗುತಲಿದ್ದೋರು ಯಷ್ಟೋ ಮಂದಿ? ಆ ಹೆಣಗಳ ವಾರಸುದಾರರು ಯಷ್ಟೋ ಮಂದಿ..