ವಿಷಯಕ್ಕೆ ಹೋಗು

ಪುಟ:Aramane.pdf/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನ್ನಾಮ ಪಾರೊತೀ ಪತಿ ಹರಹರ ಮಾದೇವಾss..

ಅಷ್ಟದಿಕ್ಪಾಲಕರ ಹೆಸರುಳ್ಳ ಮೆಟ್ಟಲುಗಳನ್ನೇರಿ ರಾಯಾಪುರದ ವಾಸ್ತುಶಿಲ್ಪಿ ಮಾಯಾಚಾರಿಯಿಂದ ನಿರ್ಮಿತ ದ್ರುಸ್ಯಾವಳಿಗಳಿಂದಲಂಕ್ರುತಗೊಂಡಿರುವ ಹುವ್ವಿನ ಮಂಟಪದಲ್ಲಿ ಯಿರಾಜ ಮಾನಳಾಗಿರುವ ಸಾಂಬವಿ ಸಮಕ್ಷಮದಲ್ಲಿ ಚಂಡನ ಸರೀರದಿಂದ ರುಂಡವನ್ನು ಬೇರ್ಪಡಿಸಲಕೆಂದು ದಪದಪ ಹೆಜ್ಜೆಯನಿಡುತ ಗುರ್ರಪ್ಪ ಸಂಗಡಿಗರೊಂದಿಗೆ ಬಂದು ಸಿರಸಾಸ್ಟಾಂಗ ಪ್ರಣಾಮ ಸಲ್ಲಿಸಿ ಯದ್ದಂಥಾದ್ದು ರುಧಿರೋದ್ಗಾರಿ ಸಂವತ್ಸರದ ಆಶ್ವೀಜ ಬಹುಳ ಹನ್ನೆರಡನೇ ಮಂಗಳಾರ ದನಿಷ್ಟಾ ನಕ್ಷತ್ರಮೂರುಗಳಿಗೆ ಸಂದರ್ಭದಲ್ಲಿ.. ಆ ಕೂಡಲೆ ಶತಭೀಷಾ ನಕ್ಷತ್ರಫಳಫಳನೆ ಮಿರುಗಿ ಮೆರೆಯಾಯಿತು. ಆಕಾಶದ ರಣಬಯಲಲ್ಲಿ ಭಯಂಕರ ಕಾಡುತೂಸಿನ ಕಾಳಗ ಸಂಭವಿಸುತ್ತಿರುವುದೋ ಯಂಬಂತೆ ಸಾವುರಾರು ವುಲ್ಕಾಪಾತಗಳಾದವು. ಬಲಿಕಾರ್ಯಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೋಯಿಂದಗಿರಿಯ ರಾಜಾ ಲಚುಮಣ್ಣನಾಯಕ ಮತ್ತಾತನ ಆಮಾತ್ಯರಾದ ಕಲಕುಂದ ರಾಘಾಪ್ಪಾಚಾರ್ಯ, ಆನೆಗೊಂದಿ ವಲ್ಲಭಾಚಾರ್ಯರು ತಮ ತಮ್ಮ ಆಸನಗಳಿಂದೆದ್ದು ನಿಂತುಕೊಂಡರು. ಸಮಸ್ತ ಕುಂತಳ ಪ್ರಾಂತದೊಳಗಿನ ಮಜ್ಜಿಗೆ ಗುಡಾಣಗಳಲ್ಲಿ ಆ ಚಣದವರೆಗೆ ತೇಲಾಡುತಲಿದ್ದ ಬೆಣ್ಣೆವುಂಡೆಗಳು ದುಡುಂ ಅಂತ ಮುಳುಗಿದವು, ಸಿಂಧವಾಡಿ ಪ್ರಾಂತದ ಕೆರೆ ಗಿರೆ ಸರೋವರಗಳೆಲ್ಲ ಹೊಯ್ದಾಡಿದವು. ಯಿಸಿಲ ಪ್ರಾಂತದ ಗರುಭವತಿಯರ ಬಸಿರೊಳಗಿದ್ದ ಭ್ರೂಣಗಳು ಹಲ್ಲುಕಡಿದು ಕಟಕಟ ಕರ್ಕಷ ಸಬುಧ ಮಾಡಿದವು, ಅಷ್ಟೇ ಅಲ್ಲದೆ ಸಮಸ್ತ ತೆಂಕಣ ಪ್ರಾಂತದಲ್ಲಿದ್ದ ಗುಡಿ, ಗುಂಡಾರ, ದೇವುಳ ದೇವಾಲಯಗಳಲ್ಲಿನ ಗಂಟೆಜಾಗಟೆಗಳು ತಮಗ ತಾವ ಅಲುಗಾಡಿ ಗಣಗಣ ಸಬುಧಮಾಡಿದವು, ಅಡಕಲ ಗಡುಗೆಗಳು ಅದುರಿದವು, ಗಿಡಮರಗಳಿಂದ ಯಲೆ, ಹುವ್ವು, ಕಾಯಿ, ಯೀಚುಗಾಯಿಗಳು ತಮ ತಮ್ಮ ಶಕ್ತ್ಯಾನುಸಾರ ವುದುರಿದವು, ಯೀ ಪ್ರಕಾರವಾಗಿ ವಡಮೂಡಿದ ಸಗುನಗಳು, ಪವಾಡಗಳು ವಂದೇ ಯರಡೇ ಸಿವ ಸಿವಾss..

ದೆವ್ವ, ಪೀಡೆ, ಪಿಚಾಚಿಗಳು ತಾವು ಅವುಚಿಟ್ಟುಕೊಂಡಿದ್ದ ಸರೀರಗಳನ್ನು ರೋಮಾಂಚನ, ಬೆಮರಿನ ಸ್ವಾಧೀನಕ್ಕೊಪ್ಪಿಸಿ ಪ್ರಾಂತ ಬಿಟ್ಟು ಪಲಾಯನ ಮಾಡಿದವು ಸಿವನೇ.. ಸಾತ್ವಿಕ ಶಕ್ತಿಗಳು ತಮ ತಮ್ಮ ಅಡಗುದಾಣಗಳಿಂದೀಚೆ ಬಂದವು ಸಿವನೇ..