೪೯೯
ಅರಮನೆ
ಕೊಡುತಿರಬೇಕು ಯಂದು ಕೆಲವರೂss....
ವಾದಿಸುತ್ತಿರುವಾಗ್ಗೆ ಅತ್ತ ಬಂಗಲೆಯೊಳಗ ಹೆಂಡತಿಯ ಹಿಂದೂ ಪರ ನಿಲುವಿನಿಂದ ರೋಸಿ ಹೋಗಿದ್ದ ಯಡ್ಡವರ್ಡನು ಕಪ್ಪೇನ ನುಂಗಿ ಹಾವಿನಂಗಾಗಿದ್ದ.. ತನ್ನನ್ನೂ, ತನ್ನ ಹೆಂಡತಿಯನ್ನೂ ಸಾಂಬವಿಯ ಗುಂಗಿನಿಂದ ಪಾರು ಮಾಡುವ ಬಗೆ ಹೇಗೆಂದು ಚಿಂತಿಸುತಲಿದ್ದ.. ಸಮಾಲೋಚಿಸುತಲಿದ್ದ.. ಮಾಯ ಮಂತ್ರಕ್ಕೆ ಬೆಲೆ ಕೊಟ್ಟು ಅದನ್ನೂ ಮಾಡಿಸಿ ನೋಡಿದ.. ವಂಚೂರಾದರು ನಯವಾಗಲಿಲ್ಲ.. ಆಗಿದ್ದು ಯಡ್ಡವರ್ಡು ಸಾಹೇಬ ದಸ್ತಾಯೇಜು ನಿರುಮಾಣ ನಿಪುಣಾಗ್ರೇಸರನೆಂದೇ ಹೆಸರು ಸಂಪಾದಿಸಿದ್ದ ರೆವರೆಂಡ್ ಗೋಯಿಂದರಾವ್ (ಯೀತನ ತಂದೆ ಮುಕುಂದರಾವನು ಸೊಜಾತಿ ವುಪಟಳಕ್ಕೆ ರೋಸಿ ಕಿರಸ್ತಾನ ಮತಕ್ಕೆ ಕುಲಾಂತರಗೊಂಡಿದ್ದನು. ಕುಂಪಣಿ ಸರಕಾರವು ಆತನಿಗೆ ಸುಬೆದಾರ್, ರೆವರೆಂಡ್ ಬಿರುದು ಬಾವಲಿಗಳನ್ನು ನೀಡಿ ಸತ್ಕಾರ ಮಾಡಿತ್ತು) ಕರೆಯಿಸಿಕೊಂಡು ಪರಿಸ್ಥಿತೀನಿ ಯಿವರಿಸಿ ಆತನ ಕಯ್ಯಿಂದ ದತ್ತಮಂಡಲ ಪ್ರಾಂತವನ್ನಾಳುವಂಥಾ ಥಾಮಸು ಮನ್ರೋ ಸಾಹೇಬನಿಗೆ ತನ್ನನ್ನು ಯಿಂಡಿಯಾದಿಂದ ಹೊರಗೆಲ್ಲಾದರೂ ಕೂಡಲೆ ವರ್ಗ ಮಾಡಬೇಕೆಂಬ ವಕ್ಕಣಿಕೆವುಳ್ಳ ಮನವಿಪುರುವಕ ದರಖಾಸ್ತನ್ನು ಬರೆಯಿಸತೊಡಗಿರುವಾಗ....
ಅತ್ತ ಸೊಕ್ಕೆ ರಾಜ್ಯದೊಳಗ ರಾಜ ಮಾರನಾಯಕನು ಮಲಕ್ಕಂಡಿದ್ದಾಗ ಯಾರೋ ದುರುಳರು ಆತನ ಕುತ್ತಿಗೆಯೊಳಗೆ ಜೋತಾಡುತಲಿದ್ದ ಚಂಡನ ತರಡುಬೀಜಗಳನ್ನು ಕಳುವು ಮಾಡಿಕೊಂಡು ಹೋಗಿ ಬಿಟ್ಟಿದ್ದರು. ಯುದ್ದು ಮುಟ್ಟಿ ನೋಡಿಕೊಳ್ಳುತಾನೆ.. ಯಿರಬೇಕಿದ್ದ ಜಾಗದಲ್ಲಿ ಅವು ಯಿರಲಿಲ್ಲ. ಗಾಬರಿ ಬಿದ್ದು ತನ್ನ ಸಾಮಾನಿನ ಮ್ಯಾಲ ಕಯ್ಯಾಡಿಸುತಾನೆ.. ಮಲಿಕ್ಕಂಬೋ ಹೊತ್ತಿನಾಗ ಆರಂಗುಲಯಿದ್ದದ್ದು ಯದ್ದಾಗ ವಂದಂಗುಲ ಆಗಿಬಿಟ್ಟಿತ್ತು.. ಆಗಿದ್ದು ಆತನು ಯಾರು ತಗಂಡೀರಿ? ಮರುವಾದಿಯಿಂದ ಕೊಡುವಿರೋ ಯಿಲ್ಲಾ.. ಚಬಕದೀಲೆ ಹೊಡ್ದು ಚರುಮ ಸುಲಿಸಲೋ ಯಂದು ತನ್ನ ಅರಮನೇಲಿದ್ದ ಆಳುಕಾಳುಗಳನ್ನು ಸಾಲಾಗಿ ನಿಲ್ಲಿಸಿ ಗದ್ದರಿಕೆ ಹಾಕುತಿದ್ದಾನೆ. ನಾನ್ತಗಂಡಿಲ್ಲ ಪ್ರಭೋ ನಾನ್ತಗಂಡಿಲ್ಲಾ. ನಮ್ಮದೇ ನಮಗೆ ಮಸ್ತು ಅಯ್ತೆ, ಅದನ ತಗಂಡೇನು ಮಾಡೇವು ಯಂದು ತಲಾಕೊಬ್ಬೊಬ್ಬರು ಹೇಳುತಿದ್ದಾರೆ.. “ಯಿದ್ದೋರು ಮುವ್ವರೋಳಗ ಕದ್ದೋರು ಯಾರು? ಮರುವಾದಿಯಿಂದ ವಪ್ಗಂಡು ತಂದು ವಾಪಾಸು ಮಾಡ್ರಿ.. ಯಿಲ್ಲಾಂದ್ರನಿಮ್ಮನ್ನು ವಂದು ಗತಿ ಕಾಣುಸ್ತೀನಿ ಯಂದು ಆತನು ಕೇಳುತಿದ್ದಾನೆ..