ವಿಷಯಕ್ಕೆ ಹೋಗು

ಪುಟ:Aramane.pdf/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೧

ಅರಮನೆ

ಸಾಂಗತ್ಯ, ಬರೀ ಬಯಲ ರೂಪಕ. ಯಿಂಥ ಅರಮನೆಯನ್ನು ವಸ್ತುವಾಗಿಟ್ಟು ತಾನು ರಚನೆ ಮಾಡುವ ಕಾವ್ಯ ಕಾಲಾನಂತರ ವುಳಿದೀತಾ? ಯಂಬ ಯಕ್ಷ ಪ್ರಸ್ನೆ ಕಾಡ ತೊಡಗಿತು ಕವಿಯನ್ನು..... ಹಂಗs ಮುಂದಕ ಹೊತಾ ಹೋಗುತಾ ಪಲ್ಲಂಗದ ಸನೀಕ ಬಂದನು. ಬಲಗಾಲ ಹೆಬ್ಬೊಟ್ಟನ್ನು ಲೀಲಾ ಜಾಲವಾಗಿ ಬಾಯೊಳಗಿಟ್ಟುಕೊಂಡು ಅದನ್ನೇ ಚಾಚಿ ಯಂದು ಪರಿಭಾವಿಸಿ ವುಮ್ಚ.. ವುಮ್ಚಯಂದು ಜಮಡುತಲಿದ್ದ ಮೋಬಯ್ಯಯಂಬುವ ದಯ್ವಿಕ ಸಿಸುವು ಕವಿಯನ್ನು ನೋಡುತ್ತಲೇ ಕಿಟಾರನೆ ಕಿರುಚಿಕೊಂಡು, ಅದರ ಯೇಕರಿಕೆ ನೋಡಿಕೋತಿದ್ದ ಯಲ್ಲಮ್ಮಜ್ಜಿ ಮುಗಿಯಲಕಾವಯ್ಯಗ ಕಾಲುಚಾಚಿ ಪಾದ ಕೊಡು ಅಂದಳು. ಅದರ ದೇಕರಿಕೆ ನೋಡಿಕೋತಿದ್ದ ದ್ಯಾಮವ್ವ ಅವಯ್ಯಗ ಆಸೀರುವಾದ ಮಾಡಲಕ ಕಯ್ಯ ಚಾಚು ಅಂದಳು. ಆದರದು ಕಾಲನss ಚಾಚಲಿಲ್ಲ.. ಕಯ್ಯನ ಚಾಚಿ ಆಸೀರುವಾದ ಮಾಡಲಿಲ್ಲ. ಯಿದು ಹಿಂಗ ಯಾರಿಗೂ ಮಾಡಿದುದಿಲ್ಲ. ಆದರೆ ಯೀಗ ಹಿಂಗ ಮಾಡುತ್ತಿರುವುದೆಂದರ ಆಗಂತುಕನ ಗ್ರಾಚಾರ ನಟ್ಟಗೆ ಯಿರುವಂಗಿಲ್ಲ.. ಯಂದುಕೊಂಡು ಆ ಮುದೇರೀರ್ವರೂ “ಯಲಾಯ್.. ನಿನ ಕಂಡೊಡನೆ ನಮ್ಮ ಸಾಂಬಯ್ಯ ಸಿಸುವು ಯಾಕ ಹೆದರಿಕಂತು? ನೀನು ನಿನ್ನ ಮನಸ್ಸಿನೊಳಗ ಮಣಮಣ ನಾಸ್ತೀಕ ಭಾವನೆಗಳನ ಯಿಟುಕೊಂಡಂಗದೀ.. ಯೀಗಿಂದೀಗಲೆ ಅವನ್ನು ವುತಾರ ಮಾಡು.. ಮಾಡು” ಯಂದು ಜುಲುಮಿ ಮಾಡತೊಡಗಿದರು.. ತುಪ್ಪದೊಳಗ ವುತ್ತುತ್ತಿ ತೇಯುತಲಿದ್ದ ತಿಂದವ್ವ “ನೀನು ನಿನ್ನ ಸರೀರದ ಮ್ಯಾಲ ಭಯ ಹುಟ್ಟಿಸುವಂತಿರೋ ಲಚಣಗಳನ ವುತಾರ ಮಾಡು” ಯಂದೂ, ಮಿಳ್ಳೆಯೊಳಗೆ ಹಾಲನ ತುಂಬುತಲಿದ್ದ ಅಂಬವ್ವ “ನೀನು ನೀರಿನ ಮುಖನ ನೋಡಿ ಯೇಸು ದಿನವಾಗಿರುವುದೋ” ಯಂದೂ ಕ್ಯಾತೆ ತೆಗೆದು ಕವಿಯನ್ನು ಕಕ್ಕಾವಿಕ್ಕಿಗೊಳಿಸಿದರು..

ತನ್ನಂಥ ಕವಿ ಜಳಕ ಮಾಡುವುದೆಂದರೇನು? ತನ್ನಂಥ ಕವಿ ನಾಸ್ತೀಕನಾಗಿರಬಾರದೆಂದರೇನು? ಅಯ್ಯಾಳಿ ಪರಿವ್ರಾಜಕನಂತೆ ಅವರನ್ನೆಲ್ಲ ತೀಕ್ಷ್ಣವಾಗಿ ನೋಡಿದ. ತದನಂತರ ತಾನು ಪಟ್ಟಣ ಸೋಮಿಗಳ ಸಮಕ್ಷಮ ಯಿರಬೇಕಾಯಿತು. ತಾನು ಕಾವ್ಯ ಬರೆಯುವ ಸಲುವಾಗಿ ಕ್ಷೇತ್ರಕಾರ್ಯದ ಸಲುವಾಗಿ ಬಂದವನೆಂದು ವಪ್ಪಿಕೊಳ್ಳಬೇಕಾಯಿತು. ಜಡೆ ತಾತ ಹೇಳಿದ್ದೇನೆಂದರೆ..