ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗ ನಿಂತು “ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯಂದು ಕೇಳಿದಳು. ಅದಕ್ಕಾಕೆಯು “ಕೇಳೆನ್ನ ಹೆಸರಾss ಯಿದ್ದರ ಮಜಕೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾss.. ನಾನು ಹೊಂಟು ಬಂದಿರೋದು ತೀರ್ಥ ಯಾತ್ರಾಮಾಡಲಕ್ಕೋಸ್ಕರಾss.. ಸಂಗಡಿಲ್ಲ ಯಾರಾss.. ದಾರಿ ಬಲು ದೂರಾss.. ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ಖೂನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವ್ವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರ್ಥಶಮರ್ಥನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಯಿಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೋ ಯಿಚ್ಫಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.
ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ಬಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀಕೇನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ನ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗ ಮರುಗಿ “ಅಕ್ಕಾ.. ನಿನ್ನ ದರುಸನದಿಂದ ನಾನು ಪಾವನಳಾದೆನು. ನಿನ್ನ ಅವಸ್ಥೇನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,