೫೨೧
ಅರಮನೆ
ನಾನೇಳಿದರೆ ಆಕೆ ಹೆಂಗ ಬಿಡುತಾಳಪ್ಪಾ.. ಯೀಸು ವರುಸ ಭೂಮಿ ಮ್ಯಾಲ ಯಿರಬೇಕಂತ ಆ ಬ್ರೆಮ್ಮನು ಪ್ರತಿಯೊಬ್ಬರ ಹಣೆಯಾಗ ಬರೆದಿರುತಾನಪ್ಪಾ.. ಅದನು ತಪ್ಪಿಸೋ ಸಕ್ತಿ ಯಾರಲ್ಲೂ ಯಿಲ್ಲ ಯಂದೇಳಿದನು. ಯೇನಾದರಾಗಲಿ ಅಂತ ಪಟ್ಟಣದ ನಿಷುವಿರವಾದಿ ಮುಪ್ಪಾನು ಮುದೇತ ನಾದ ಮೂಡ್ಲು ಕೊಳ್ಳೆಪ್ಪನಲ್ಲಿಗೆ ಹೋಗಿ “ನೀನಾರ ಬಾರೆಜ್ಜಾ” ಯಂದು ಕೇಳಿದ್ದಕ್ಕೆ ಆತನಿದ್ದು “ನಾನೂ ಬಂದಿದ್ನೆಪ್ಪಾ.. ರಾಣೆವ್ವನ ತಡಿಕೆಯಂಗಿರೋ ಸರೀರದ ಯಾದೋ ವಂದು ಮೂಲ್ಯಾಗ ಪ್ರಾಣ ಸಿಕ್ಕಾಕ್ಕೊಂಡು ವದ್ದಾಡುತ್ತಿದ್ದಂಗಯ್ತಪ್ಪಾ.. ಬೇಲಿ ಮ್ಯಾಲ ವಣಾಕಿದ ದೋತರ ಬಿಡುಸ್ದಂಗ ಬಲು ಹುಷಾರಿಕೀಲೆ ಅದನು ಬಿಡಿಸಿ ಹೊರ ಬರೋ ಹಾಂಗ ಮಾಡಬೇಕು.. ನಾನೇ ಬಂದು ವಂದುಕಯ್ನ ನೋಡ್ಕಂತೀನಿ ನಡೀss” ಯಂದು ಯದ್ದು ಕುಂಡಿ ಬುಡಕಿದ್ದ ವಲ್ಲೀನ ಕೊಡವಿ ಹೆಗಲಿಗಿಳಿಬಿಟ್ಟುಕೊಂಡು ಹೊಂಟನು. ಹೋಗು ಹೋಗುತ ದಾರ್ಯಾಗ “ಯ್ಯೋಯ್ ಬಂಗಾಳಯ್ಯಾ. ಯ್ಯೋಯ್...ಕೊಳ್ಳೆಯ್ಯಾ, ಯ್ಯೋಯ್ ಜವರಯ್ಯಾ” ಯಂದು ವಬ್ಬೊಬ್ಬರನು ಹೆಸರಿಡಿದು ಕರೆದನು. ಪಟ್ಟಣದ ಮುದೇರಿಗೆಲ್ಲ ನಾಯಕಮಣಿಯಾದ ಆತ ಕರೆದದ್ದಕ್ಕೆ ಯಾರೂ ಬಾರದಿರಲಿಲ್ಲ.. ನೂರಾರು ಮುದೇರೆಲ್ಲರು ಪ್ರವಾಹದೋಪಾದಿಯಲ್ಲಿ ಹೊಂಟು ಹವಾ ಮಹಲು ತಲುಪಿದರು. ಯ್ಯೇಟೊಂದು ವಯಸ್ಸಾಗಯ್ತೆ ಯಿವರಿಗೆಲ್ಲ, ಹರೇದ ಹುಡುರಂಗಯ್ದಾರಲ್ಲ.. ಸದರಿ ಪಟ್ಟಣದ ಮಂದಿಗೆ ಬದುಕೋದಷ್ಟೆ ಗೊತ್ತುಂಟೇ ಹೊರ್ತು ಸಾಯೋದೇ ಗೊತ್ತಿಲ್ಲವಲ್ಲ.. ಯಿವರ ಆಯುಷ್ಯ ಯಾವಾಗ ತುಂಬುವುದೋ.. ತಾನ್ಯಾವಾಗ ಯಿವರ ಪ್ರಾಣ ತೆಗೆಯುವೆನೋ ಯಂದು ಅಲ್ಲೇ ಅಗೋಚರ ಸ್ಥಿತೀಲಿ ನಿಂತಿದ್ದ ಯಮದರುಮರಾಜನು ಅವರನ್ನೆಲ್ಲ ನೋಡಿ ಗೊಣಗಾಡಿಕೊಂಡನು. ಅವುದು.. ಆ ಮಾಶಯ ಹಂಗ ಅಂದುಕೊಂಡಿದ್ದರಲ್ಲಿ ವುತ್ಪ್ರೇಕ್ಷೆಯಿರಲಿಲ್ಲ. ವಂದೆರಡು ಮನುವಂತರಗಳ ಹಿಂದೆಯೇ ಹುಟ್ಟಿರುವಂಥೋರಿಗೆ ಸದರಿ ಪಟ್ಟಣದಲ್ಲಿ ಬರಯಿರಲಿಲ್ಲ.. ಹಾವು, ಆಮೆ, ಮೊಸುಳೆಗಳಂಗ ದೀರ್ಘಾವದಿsಕಾಲ ಬದುಕು ನೀಚಬಲ್ಲಂಥೋರು ಅವರಾಗಿದ್ದರು. ಅಂದಮಾತ್ರಕ್ಕೆ ಸಾವು ಅವರ ಗೊಡವೆಗೆ ಹೋಗುತ್ತಿರಲಿಲ್ಲ ಯಂದರ್ಥವಲ್ಲ.. ಆಗಾಗ್ಗೆ ಜರುಗುತ್ತಿದ್ದ ಯುದ್ಧಗಳಲ್ಲೋ, ಕಾಳಗಗಳಲ್ಲೋ ತಮ ತಮ್ಮ ರಾಜರ ಪರವಾಗಿ ಕಾದಾಡಿ ಯೀರಮರಣ ವನ್ನಪ್ಪುತ್ತಿದ್ದರು.. ಅಥವಾ ಗ್ರಾಮಕ್ಕಾಗಲೀ ತಮ್ಮ ಕುಲಕ್ಕಾಗಲೀ ಅನುವು ಆಪತ್ತು ಬಂದಾಗ ಅದನ್ನು