೫೩೨
ಅರಮನೆ
ಮರತು ಬಿಟ್ಟಾನ. ಯೇಳು ತಲೆಮಾರು ಕುಂತು ತಿಂದರೂ ಸವೆಯೋದಷ್ಟು ಮಸ್ತು ಆಸ್ತಿ ನಮಗಯ್ತೆ. ಯಿನ್ನೊಬ್ಬರ ಸೊತ್ತಿಗೆ ನಾವೆಂದೂ ಆಸೆಪಡೋರಲ್ಲ. ಪರಸ್ತ್ರಿಸೋದರರು ನಾವು. ಸುಳ್ಳು ಯಂಬ ಸಬುಧವು ನಮ್ಮಮನೆ ತಲಬಾಕಲು ದಾಟೋದಿಲ್ಲ. ಸಾಂಬವಿಯ ಪ್ರೇರಣಾ ಆತು.. ಹಂಗ ನಿಂತನಿಲುವೀಲೆ ಹೊಂಟು ಬಂದೀವಿ. ನೀವು ಪರವಾನಿಗಿ ನೀಡಿದರ ಮಾತಾಯಿಯ ಸರೀರದ ಮ್ಯಾಲ ಆಭರಣ ಮುಡುಸುತೀವಿ’’ ಯಂದು ಗಂಟೆ ಬಾರಿಸಿದಂತೆ ನುಡಿದು ಅವಕ್ಕಾಗಿಸಿದನು....
ಕಾಟಯ್ಯ ಮೊದಲಾದೋರು ಕೆಳಗು ಮ್ಯಾಲಕ್ಕು ನೋಡಿದರು. ಮಟ್ಟಸವಾದ ಸರೀರ.. ಮುಖದ ಮ್ಯಾಲ ರಾಜಕಳೆ....
‘‘ನಿಮ್ಮ ನಾಮದಾವುದು?’’ ಯಂದು ಮಾಮಂದಿರ ಪಯ್ಕಿ ವಬ್ಬನಾದ ಪೋತರಾಜ ಕೇಳಿದ್ದಕ್ಕೆ ಆತನು ‘‘ಸ್ರೀಮಂತಪ್ಪ ಯಂಬುದು ಲೋಕರೂಡಿs ಅದೆ’’ ಯಂದು ವುತ್ತರಿಸಿದನು. ಅದಕ್ಕೆ ಯಿದ್ದು ಯಿನ್ನೊಬ್ಬ ಮಾವನಾದ ಕುಬೇರ ನಾಯಕನು ‘‘ಕಳೇಬರಗಳಿಗೆ ಆಭರಣ ಮುಡುಸಿದಂಥ ಅನುಭವವುಂಟೋ?” ಯಂದು ಕೇಳಿದ್ದಕ್ಕೆ ಆತನು ‘‘ಯಾಕಿಲ್ಲ ಕನಜ್ಜಾ.. ಕಳೇಬರಗಳಿಗೆ ಮುಡುಸೋದೇ ನಮ್ಮ ಕುಲಕಸುಬಯ್ತೆ. ಹರಪನಹಳ್ಳಿ ಪಾಳೇಗಾರ ದಾದಯ್ಯ ನಾಯಕನ ಹೆಂಡತಿ ಜಂಪನಾಗತಿಯ ಕಳೇಬರಕ, ಮಾಚೇನಾಯಕರ ತಾಯಿ ಯಿರುಪಾಂಬೆಯ ಕಳೇಬರಕ, ಬಾಗಳಿಯ ಕಾಮಭಟ್ಟರ ಕಳೇಬರಕ, ವುಚ್ಚಂಗಿ ಕೋಟೆಯನ್ನಾಳಿದ ಹೊನ್ನಾಗತಿಯ ಕಳೇಬರಕ, ತಾಂಬೂಲ ಜಗಿತಾ ಜಗಿತಾ ಮಡಿದ ಕೊಂಗಲೂರು ರಾಜ ಕೆಂಗಣ್ಣ ನಾಯಕ, ಯಿಷ್ಟೇ ಯಾಕ.. ಹಯ್ದರಾಲಿ ಖಾನ ಸಾಹೇಬನಿಗೂ ಆಭರಣದಲಂಕಾರ ಮಾಡಿದೋರದವೀ ನಾವು’’ ಯಂದು ಹೇಳುತಾs ಹೇಳುತ ಆತನು ತನ್ನ ಕೊಳ್ಳೊಳಗೆ ಜೋತಾಡುತ್ತಿದ್ದ ಪದಕವನ್ನು ಹೊರ ತೆಗೆದು ಯಲ್ಲಾರಿಗೂ ತೋರಿಸುತ್ತ ‘‘ನಮ್ಮ ಕರಕವುಸಲ್ಯವನ್ನು ಕಣ್ಣಾರ ಕಂಡು ತಿಪ್ಪು ಸುಲ್ತಾನ ಸಾಹೇಬರು ಯೀ ಪದಕವನ್ನು ತಮಕಯ್ಯಾರ ನಮ ಕೊಳ್ಳಾಗ ಹಾಕಿ ಸನ್ಮಾನ ಮಾಡ್ಯಾರ.. ಯಿದರ ಮ್ಯಾಲ ‘ಕ್ಯಾಥುರಕೀದನ್’ ಯಂದು ಪಾರಸಿ ಭಾಷೇಲಿ ಕೆತ್ತಲಾಗಯ್ತೆ. ನಿಮಗ ಮೋದಲಕ ಬರೋದಿಲ್ಲಾದ್ದರಿಂದ.. ನಿಮ್ಮಲ್ಲಿ ನಮ್ಮಂಗ ಸಾಲೇ ಕಲುತೋರು ಯಾರೂ ಯಿಲ್ಲಾದ್ದರಿಂದ ನಾವೇ ಯಿದರರ್ತ ಬುಡಿಸಿ ಹೇಳತೀವಿ. ಅದೇನಪಾ ಅಂದರ ಕಳೇಬರಾಲಂಕಾರ ಚಕ್ರವರ್ತಿ