ವಿಷಯಕ್ಕೆ ಹೋಗು

ಪುಟ:Aramane.pdf/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಲುವಾಗಿ.. ಮನೆಯನ್ನು ಯಬ್ಬಿಸಿ ನಂದಗೋಕುಲ ಮಾಡುವ ಸಲುವಾಗಿ.. ಮತ್ತಿನ್ನಿಷ್ಟೋ ಸಂದೂಕಗಳನ್ನು ತೆರೆದು ನೋಡುವ ಸಲುವಾಗಿ....

“ಯಿದನು ಮೋದಿ ನೀನು ನನಗ ತಂದೆಯಾಗಬೇಕಪ್ಪ” ಯಂದು ವಾಲಿಕಾರನಿಗೆ ಕಲೆ ಬಿತ್ತು. ಅದಕಿದ್ದು ಅವಯ್ಯನು “ನನ್ನೇನು ಗವುಡ ಅಂದಕಂಡೀಯಾ.. ಸಾನಭೋಗ ಅಂದಕಂಡೀಯಾ” ಯಂದನು. ಆಗಿದ್ದು ಮುದೇದು “ನೀನು ಸಾಲಿ ಕಲಿಯಲಕ ಹೋತಿದ್ದುದನು ನಾನು ನೋಡಿಲ್ಲಾಂದು ಕಂಡಯಾ. ಅಕ್ಸರಕ ಅಕ್ಸರಾನ ಹೊಂದಿಸಿಕೊಂಡು ಮೋದಲೇಬೇಕಪ್ಪಾ” ಯಂದು ಪಟ್ಟುಹಿಡಿಯಿತು. “ನಂಗೆ ಮೋದಲಕ ಬರಾಕಿಲ್ಲೆಮ್ವೋ” ಯಂದಾತನು ಅದರ ಕಯ್ಯಿಂದ ತಪ್ಪಿಸಿಕೊಂಡು ಬೀದಿ ಪಾಲಾಗಿ ಕಣ್ಮರೆಯಾದನು.

ತನ್ನ ಕಾಳಗಯ್ಯನೇ ಅಕ್ಸರ ರೂಪಧಾರಣ ಮಾಡಿ ಜಾಬಿನೊಳಗ ಅಡಗಿ ಕುಂತಾನೆ ಯಂದು ಪರಿಭಾವಿಸಿದ ಬಟಾಬಯಲವ್ವನು ಆಗಿಂದಾಗಲೆ ಗುಡುಲನು ಪರಿತ್ಯಾಗ ಮಾಡಿ ಬೀದಿಗುಂಟ ನಡೆಯತೊಡಗಿತು. ‘ಹೋಹೋss ಬಟಾಬಯಲವ್ವ..’ ‘ಹ್ಹಾ.. ಹ್ಹಾ.. ಬಟಾಬಯಲವ್ವಾ’ ಯಂದುದ್ಗಾರ ಮಾಡುತ ಮಂದಿ ಯಡ ಬಲಕಾದರು.. ಬಟ್ಟಂಬಯಲವ್ವಗ ಜಾಬು ಬಂದಯ್ತೆ.. ಯಂಬ ಸುದ್ದಿಯು ಪರಿಮಳದೋಪಾದಿಯಲ್ಲಿ ಹರಡಿತು ಪಟ್ಟಣದ ತುಂಬೆಲ್ಲ.. ಆ ವಂದು ಛಣದಲ್ಲಿ ಜಾಬು ಯಂಬುವ ಪರಿಭಾಗ್ಯದಡವಿಯೊಳಗೆ ಹರಡಿತು.. ಯಿಡೀ ಪಟ್ಟಣವು ಸಿವ ಸಂಚಾರ ಕಯ್ಕಂತು.. ಜಾಬು ಅಂದರ ಹೆಂಗಿರತಯ್ತೆ? ಅದರೊಳಗೆ ಅಕ್ಸರಗಳು ಯಾವ ನಮೂನಿ ಯಿರತಾವು.. ಅವಕ ಕಯ್ಯಿ ಕಾಲು ಯಿರುತಾವಾ? ಯಿಲ್ಲವಾ? ಯಂದು ನೋಡಿ ತಾವು ಧನ್ಯರಾಗುವ ಸಲುವಾಗಿ ಅಬಾಲರುದ್ದಾರಾದಿಯಾಗಿ ಮಂದಿಯು ‘ಬಟಾಬಯಲವ್ವಾ.. ಬಟ್ಟಂಬಯಯಂದು ಕೂಗುತ ಆಕೆಗಾಗಿ ಗಾರಾಡತೊಡಗಿತು. ಸಂಭರದ ಮಾಯೆ ಮುಸುಕಿ ತಮ ತಮ್ಮ ಕಣ್ಣಳತೆ.. ಕೂಗಳತೆಯಲ್ಲಿದ್ದ ಮುದುಕಿಯನ್ನು ಆ ಛಣ ಗುರುತಿಸದಾಯಿತು. ಅರೆ ಯಿಲ್ಲಯಿತಲ್ಲಾ ಯಂದು ಕ್ರಮೇಣ ಗುರುತಿಸಿ “ಯಲಾ ನಮ್ಮವ್ವನೇ.. ಯೇಟು ಕಳೆ ಬಂದಯ್ತಲ್ಲಾ ನಿನಗ.. ಯಂಥ ಪುಣ್ಯವಂತಿ ಕನವ್ವಾ ನೀನು.. ಯಲ್ಲಾರನು ಬಿಟ್ಟು ಜಾಬು ನಿನಗೊಂದಾss ಬಂದಯಿತಂತಲ್ಲ... ಜಾಬು ಅಂದರ ಸುಕ್ಕರೆ ದೆಸೆ ತಾಯಿ.. ಸುಕ್ಕುರ ದೆಸೆ ಅಂದರ ಜಾಬು ಕನತಾಯಿ.. ಅದು ಹೆಂಗಯ್ತೆ? ತೋರಿಸಲಕ ಬೇಕವ್ವಾ... ನೋಡಿ ಧನ್ಯರಾಗತೇವಿ” ಯಂದು ಆಕೇಗಂಟಿಕೊಂಡಿತು. ಯಲ್ಲಿಯೀ ಲವ್ವ.. ಯಲ್ಲದೀಯೇ ನಮ್ಮವ್ವಾss’