ಪೊಕ್ಕು ಜಡ್ಡು ಹಿಡಿದು ಮಲಗಿದ್ದ ಪೆದರೆಡ್ಡಿಯ ಯೋಗಕ್ಷೇಮ ಯಿಚಾರಿಸಿದ್ದೂ ಅಲ್ಲದೆ.. ಅವನತಮುಖನಾಗಿದ್ದ ಕೇಸುವರೆಡ್ಡಿಯ ಮಯ್ದಡವಿ “ಗಾಡ್ ಬ್ಲೆಸ್ ಯು ಮಯ್ ಚಯ್ಲಡ್” ಯಂದೂ ಹರಸಿದನು. ವುಯ್ಯಾಲುವರ ಕುಟುಂಬದೊಂದಿಗೆ ದಕ್ಷಿಣಾತ್ಯ ಸುಗ್ರಾಸ ಭೋಜನ ಸವಿದು ಯೇಳಾ ಪಟ್ಟಿ ಪ್ರಕಾರ ಚಿನ್ನೋಬುಳವನ್ನು ತಲುಪಿದನು....
ರೆಡ್ಡಿ ನಾಯ್ಡು ಸಮುದಾಯದ ಆರಾಧ್ಯ ದಯವವಾದ ನರಸಿಮ್ಮ ದೇವರು ನೆಲಗೊಂಡಿರುವ ಪರಮ ಪಯಿತ್ರಕ್ಷೇತ್ರವದು. ವಂದು ಕಾಲಕ್ಕೆ ಯಿತ್ತ ಯಿಜಯನಗರದರಸರಿಂದಲೂ.. ಅತ್ತ ಕಾಕತೀಯ ರಾಜರುಗಳಿಂದಲೂ ಸೇವಿಸಿಕೊಂಡಿರುವಂಥಾ ದೇವರದು. ವಬ್ಬೊಬ್ಬ ರಾಜರು ಕಟ್ಟಯಿಸಿರುವ ಗೋಪುರಗಳು, ಆ ದೇವಾಲಯದ ಯಂಟೂ ದಿಕ್ಕಿನಲ್ಲಿ ಗಗನಚುಂಬಿಯಾಗಿ ಸಿಖರ ಚಾಚಿಕೊಂಡವೆ.. ಆ ದೇವರು ಬಹಿರಂಗವಾಗಿ ಸಸ್ಯಾಹಾರಿಯಾಗಿದ್ದು ಆಂತರಂಗಿಕವಾಗಿ ಮಾಮುಸಾಹಾರಿಯಾಗಿರುವುದು. ನಾಸ್ತೀಕರನ್ನು ವುರಿಗಣ್ಣು ಬಿಟ್ಟು ಸುಡುತ ತನ್ನ ಖ್ಯಾತಿ ಹೆಚ್ಚಿಸಿಕೊಂಡಿರುವುದು. ತನಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೊಲೆ ಸುಲಿಗೆಗಳನ್ನು ಪೋಷಿಸಿಕೊಂಡು ಬಂದಿರುವುದು. ಕೊಲೆ ಮಾಡಿಸೋರು, ಮಾಡೋರೆಲ್ಲ ಅದಕ ಅಡ್ಡಬಿದ್ದು ಆಸೀರುವಾದ ಪಡಿತಾ ಬಂದಿರುವರು.. ವಳ್ಳೆಯವರು, ಕೆಟ್ಟವರೆಲ್ಲ ಅದರ ನಾಮ ಜಪಿಸಿಕಂತ ಮಲಗುವುದು, ಯಚ್ಚರಾಗುವುದು ಮಾಡುತಾರೆ.. ಸುತ್ತನ್ನಾಕಡೆಮಂದಿ ಚಿನ್ನೋಬಳ ಯಿರೋ ದಿಕ್ಕಿನತ್ತ ಕಾಲು ಹಾಕಿ ಮಲಗುವುದಿಲ್ಲ, ವಂಧಮಾಡುವುದಿಲ್ಲ, ಯರಡs ಮಾಡುವುದಿಲ್ಲ....
ಆ ಹೆಸರು ಯತ್ತಿದೊಡನೆ ಗಡಗಡನ ನಡುಗುತಾರ.. ಅಂಥ ವುಗ್ರಕ್ಷೇತ್ರವನ್ನು ದತ್ತಮಂಡಲದ ಕಲೆಟ್ರುಸಾಹೇಬನು ಬೇಕೆಂದೇ ತಡವಿಕೊಂಡನು. ಅರ್ಚಕರೂ, ಧರುಮಕರ್ತರೂ “ಬ್ಯಾಡ ಸ್ವಾಮೀ ಬ್ಯಾಡ.. ಯಿದನು ತಡವಿಕೊಂಡಲ್ಲಿ ನೀವು ರಗುತಕಾರಿ ಸಾಯುತೀರಿ” ಯಂದು ಗಿಳಿಗೆ ಹೇಳಿದಂಗ
ಗಲಗಲಾಂತ ಹೇಳಿದರು. ಅದಕಿದ್ದು ಮನ್ರೋ ಸಾಹೇಬನು ಅತಿಮಾನುಷ ಸಗುತಿಯನ್ನು ವಂದು ಕಯ್ಯಿ ನೋಡೇಬಿಡುವುದೆಂದು ನಿರ್ಧರಿಸಿದನು. ಕಿರಸ್ತಾನನಾದ ಆತನು ದೇವುಳ ಪ್ರವೇಶಿಸುವುದನ್ನು, ದಯವವನ್ನು ಯಿರುದ್ಧ ಹಾಕಿಕೊಳ್ಳುವುದನ್ನು, ರಗುತಕಾರಿ ಸಾಯೋದನ್ನು ನೋಡಲಕೆಂದು ಸಾಯಿರಾರು ಸಂಖೇಲಿ ಭಕುತಾದಿ ಮಂದಿ ನೆರೆದಿರುವಾಗ್ಗೆ...