ಹೆಣವನ್ನು ಸಾಸ್ತರೋಕ್ತವಾಗಿ...
ಅದೇ ಪಟ್ಟಣದೊಳಗ ಅರಮನೆಯಂಬುವ ಬಟಾಬಯಲೆಂಬುದು ಯಿತ್ತಲ್ಲ.. ಅದು ಬಟಾಬಯಲವ್ವ ಅನಬಾರದ್ದನ್ನು ಅಂದಾಡಿ ಹೋದ ಲಗಾಯ್ತು ಕಲಾವುಲ್ಲಿಯಾಗಿ ಬಿಟ್ಟಿತ್ತಲ್ಲಾ... ಅಲ್ಲಿದ್ದ ಯಾರೊಬ್ಬರ ಮುಖದಲ್ಲೂ ಅವುಸಧಕ್ಕ ಬೇಕೆಂದರೂ ಥಟಗು ರುಗುತ ಯಿರಲಿಲ್ಲಲ್ಲಾ... ಚಯಿತನ್ಯದ ಸಿಲುಮೆಯಂತಿದ್ದ ಸಾಂಬಂಯ್ಯ ತಂಬಾಕಿನ ಸಿಲುಮೆಯನು ಹಿಡಕೊಂಡಿದ್ದಾತ ಕೆಳಗಿಟ್ಟಿರಲಿಲ್ಲಲ್ಲಾ.. ಹಣೆಯ ರೇಖೆಗಳೊಳಗ ಆ ಮಾಯಾವಿ ಮುದೇದರ ರೂಪ ತರಾವರಿ ಆಕಾರ ಪಡಕೊಂಡಿತ್ತಲ್ಲಾ.. ಅಕ್ಕಸರ.. ಅಕ್ಕಸರ ಯಂಬುದಕ್ಕೆ ಬದಲಾವಯ್ಯನು ರಕ್ಕಸರ.. ರಕ್ಕಸರ ಯಂದು ಬೆಬ್ಬಳಿಸುತಲಿದ್ದುದು ಕಂಡು ಭಕುತಾದಿ ಮಂದಿ ವಸ್ತಿಯೊಳಗ ತಾಯಿ ಜಾಗ್ರುತಗೊಂಡಿರುವಳೆಂದೇ ಭಾವಿಸಿ ತಲಾವಬೊಬ್ಬರು ವಂದೊಂದು ರೀತಿ ವಳಗ ಅಲವುಕಿಕವಾಗಿ ಆಲೋಚಿಸತೊಡಗಿದರು.. ಕಲ್ಪನಾ ಯಿಲಾಸದೊಳಗ ಮುಳುಗೇಳ ತೊಡಗಿದರು.. ಕಟ್ಟುವ ಕಥೆಗಾರರಾಗ ತೊಡಗಿದವರೆಷ್ಟೋ ಹಾಡುವ ಹಾಡುಗಾರರಾದವರೆಷ್ಟೋ? ಪರವೂರುಗಳಲ್ಲಿರೋ ಯಿನ್ನುಳಿಕೇ ಮಂದಿಯ ಕಿವಿ ಕಣಜಗಳಿಗೆ ತುಂಬುವ ಸಲುವಾಗಿ ತಾಳ ತಂಬೂರಿ, ಡೋಲಕು, ಕಂಜರಿವೇ ಮೊದಲಾದ ಹತಾರಗಳನ್ನವುಚಿಕೊಂಡು ತಮತಮೆಂಡರು ಮಕ್ಕಳು ಮರಿ ಮನೆಮಠ ಮರೆತು ಅಬಡಾ ದಬಡಾ ಪಯಣ ಹೊಂಟವರೆಷ್ಟೋ? ಅಲ್ಲೆಲ್ಲ ಹೇಳಿ ದಣಿದವರೆಷ್ಟೋ? ಹಾಡಿ ಹಗುರಾದವರೆಷ್ಟೋ? ಕುಣು ಕುಣುದು ಹಾರಾಡಿದವರೆಷ್ಟೋ? ಕೇಳಿಸಿಕೊಂಡವರೂ ಕೂಡ ಕಥೆಗಾರರಾದುದಾಗಲೀ, ಕವಿಗಳಾದುದಾಗಲೀ ತಡಾಗಲಿಲ್ಲ ಸಿವನೇ.. ಅವರೊಂದೊಂದು ವುವುಖಿಕ ಕಥೆಗಳೊಳಗ, ಕಾವ್ಯಗಳೊಳಗ ಸಾಂಬಯ್ಯ ವಂದು ನಮೂನಿ, ಬಟಾಬಯಲವ್ವ ವಂದು ನಮೂನಿ, ಸಾಂಬವಿ ವಂದು ನಮೂನಿ, ಪಟ್ಟಣ ಸೋಮಿಗಳು ತಲಾ ವಂದೊಂದು... ಆ ಮ್ಯಾಲ ಯಿನ್ನೊಂದು ನಮೂನಿ.. ಆ ಮ್ಯಾಲ.. ಸಿವ ಸಿವಾ.. ನಾದದ ಲಯದೊಳಗ ಅವರಿಗೊಂದು ಖಾಯಮ್ಮಾದ ಚಹರೆ ಯಿತ್ತಾ? ಅವರ ಸೊಂತ ಬದುಕಿನ ಮೊಹರೆ ಯಿತ್ತಾ? ಹೇಳುವುದಕ ಕೇಳುದಕ ನಡುವೆ ತಾಳಿಕೆಯಿತ್ತಾ.. ಹೇಳುಗರ ಬಾಯಿಯಿಂದ ಹೊಂಡುತಲಿದ್ದುದೊಂದಾದರ ಕೇಳುಗರೆದೆಯೊಳಗ ಅದು ಪಡಕೋತಿದ್ದ ರೂಪವೇ ಬೇರೆಯಾಗಿರುತ್ತಿತ್ತು.. ತ್ರಿಕಾಲಗಳು ಕೂಡ ಅದಲು ಬದಲು ಕಂಚೀ ಬದಲಾಗಿ ಬಿಡುತ್ತಿದ್ದವು.. ಹಿಂಗಾಗಿ