ನೋಡಲಕೊಂದು ಛಂದ ಯಿದ್ದವಂತೆ.... ಸತ ಸಹಸ್ರಕೋಟಿ ದೀಪಗಳ ಕುಡಿಗಳಾಗಿದ್ದವಂತೆ.. ಸತ ಸಹಸ್ರಕೋಟಿ ಚಿಟ್ಟೆ ಪತಂಗಗಳಾಂಗ ಯಿದ್ದವಂತೆ, ಪರಮಾತುಮನೊಳು ಐಕ್ಯ ಆಗಲಕಂತ ಹೊಂಟು ಬಂದ ಸತ ಸಹಸ್ರಕೋಟಿ ಜೀವಾತುಮ ಗಳಾಂಗಿದ್ದವಂತೆ.. ಯವ್ವಾ ನಾನು ಕನ್ನೂಡ, ಯವ್ವಾ ನಾನು ತೆಲುಗು, ನಾನು ಇಂಗಲೀಸು, ನಾನು ಮಲಯಾಳಿ, ನಾನು ಅರವ, ಯಂದು ಮುಂತಾಗಿ ತಮಗ ತಾವ ಪರಿಚಯಿಸಿಕೊಂಡವಂತೆ, “ಆಹ್ಹಾ.. ನನ ಕಂದಯ್ಯಗ ವಲಿಯದ ನೀವು ಯೀ ಭೂಮಿ ಮ್ಯಾಗ ಯಾಕೆ ಯಿರುವಿರಿ?” ಯಂದನಕಂತ ತಾಯಿ ಅವನ್ನೆಲ್ಲಾ ಯಲ್ಡೇ ಯಲ್ಡು ಗುಕ್ಕು ಮಾಡಿ ಬಾಯೊಳಗ ಯಿಟುಕೊಂಡು ಬಿಟ್ಟಳಂತೆ....
ಆದಮ್ಯಾಲೂ ಸಾಂಬವಿಯ ಕೋಪ ತಮಣಿಯಾಗಲಿಲ್ಲವಂತೆ.. ಮಾನವ ಕೋಟಿಯ ಯದೆ ಗಂಟಲುಗಳೊಳಗ ರೂಪಯಿರದ ಅಕ್ಕಸರಗಳೆಂದರೆ ಭಾವನೆಗಳು, ಸಂಬೋಧನೆ ವಾಚಕಗಳು ಯಿದ್ದವಲ್ಲಾ.. ಅವಕ್ಕೂ ಹಾಜರಾಗುವಂತೆ ಆಗ್ನೆ ಮಾಡಿದಳಂತೆ.. ಯೀರೇಳು ಲೋಕಗಳೊಳಗ ಸತಸಹಸ್ರಕೋಟಿ ಗಂಟಲೊಳಗಿಂದ, ಯೆದೆಮಿದಿಳುಗಳೊಳಗಿಂದ ಭಾವನೆಗಳು ವುತಾರಗೊಂಡು ಮನೋ ಯೇಗದಲ್ಲಿ ಸಾಗಿ ಆಕೆಯ ವಡಲು ತುಂಬಿದವಂತೆ.
ಛಣಾರ್ದದಲ್ಲಿ ಲೋಕ ಲೋಕವೆಲ್ಲ ಅಕ್ಕಸರ ಭಾವನೆಗಳಿಂದ ವಂಚಿತಗೊಂಡು ಅಯೋಮಯ ವಾದವಂತೆ ಸಿವನೇ. ಅವರವರು ಯಿವರವರಿಂದಲೂ ತಮ ತಮ್ಮ ಪಂಚೇಂದ್ರಿಯಂಗಳ ನಿಗರಾವಣೆ ಯಿಂದಲೂ ದೂರವಾದರಂತೆ.. ವಬ್ಬೊಬ್ಬರು ವಂದೊಂದು ನಡುಗಡ್ಡೆಯಾದರಂತೆ. ಅಂತರ್ ಪಿಚಾಚಿ ಗಳಂತಾಗಿ ಬಿಟ್ಟರಂತೆ. ನರ್ರಮಾನವರೊಂದೇ ಯಾಕ ಅಡಡವಿಗಳಲ್ಲಿನ ಪಸುಪಚ್ಫಿಗಳೂ, ಪರುವತ ತಪ್ಪಲಲ್ಲಿ ತಪೋನಿರತ ತಾಪಸಿಗಳೂ ಸಿಲಾವಿಗ್ರಹಗಳಂತಾಗಿ ಬಿಟ್ಟರಂತೆ...ಗುಡಿಗಳೊಳಗ ಗಂಟೆ ಜಾಗಟೆಗಳನ ಭಾರಿಸವರಿಲ್ಲ ದಾಂಗಾಯಿತಂತೆ.. ಅರ್ಚಕರು ಆದಿವಾಸಿಗಳಂತಾಗಿ ಬಿಟ್ಟರಂತೆ.. ಯಿದರ ತಿಕ್ಕಡಿ ಗಂಧರ್ವ, ಕಿನ್ನರ, ಕಿಂಪುರುಸರಿದ್ದ ಲೋಕಗಳನ್ನೂ ಬಿಡಲಿಲ್ಲವಂತೆ.. ಯಿಂದ್ರನ ಅಂಬ್ರಾವತಿ ಪಟ್ಟಣದೊಳಗ ಸಂಗೀತದ ವಾದ್ಯಗಳು ನುಡಿಸುವವರಿಲ್ಲದೆ ಕಸಬಾರಿಗೆಗಳಿಗಿಂತ ಕಡೆಯಾಗಿ ಬಿಟ್ಟವಂತೆ ಸಿವನೇ, ರಂಭೆ, ವೂರ್ವಸಿ, ತಿಲೋತ್ತಮೆಯರೇ ಮೊದಲಾದ ಸುಂದರಾಂಗಿಯರು ಕುಣಿಯಲಕಾಗದೆ ಕುಂಟು ಬಿದ್ದರಂತೆ ಸಿವನೇ...