ವಿಷಯಕ್ಕೆ ಹೋಗು

ಪುಟ:Aramane.pdf/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನುಮಕೂ, ನಿನ್ನ ರೂಪವೇ ಸುರಾಪಾನ ಯಂಬಿವೇ ಮೊದಲಾದ ಸಹಸ್ರಸಂಖ್ಯೆಯಲ್ಲಿದ್ದವು. ಸಾಂಬವಿ ಹಂಟುಬನ್ನಿ ಯಂದು ಸುಗ್ರೀವಾಗ್ನೆ ಮಾಡುತ್ತಲೇ ಅವು ಹೆನ್ರಿಯ ಸರೀರ ಮತ್ತು ಮನಸ್ಸಿನಿಂದ ಪಯಣ ಹೊಂಟು ಬಿಟ್ಟಿದ್ದವಷ್ಟೆ. ಭೋಸಂಖ್ಯಾತ ಆಂಗ್ಲ ಭಾಷೆಯ ಅಕ್ಕಸರs ಸಬುಧ ಭಾವನೆಗಳೊಂದಿಗೆ ಯೇಗಿ ಯೇಗೀ ಅವಕೂ ಸಾಕಾಗಿತ್ತು ಬೇರೆ. ಸಾಂಬವಿಯ ಸರೀರದೊಳಗ ವಂದು ಮೂಲೆಯಲ್ಲಿ ಅವು ಅಯಿಷಾರಾಮಿ ರೀತಿಯಲ್ಲಿ ವುಳುಕೊಂಡುಬಿಟ್ಟವು. ಸರಸೊತಿಯ ಯಿನ್ನಪದ ಮೇರೆಗೆ ಜಗದಂಬೆಯು ಬಿಡುಗಡೆಯ ಆಗ್ನೆ ನೀಡಲು ಅವು ಅಡಲ್ಲಾಗಿ ಹೋದವು. ವಲ್ಲದ ಮನಸ್ಸಿನಿಂದ ಹೊರ ಹೊಂಡುವ ಹೊತ್ತಿಗೆ ಕಾಲ ಮೀರಿತ್ತು. ಹರಟೆ ಕೊಚ್ಚುತ್ತ, ಪ್ರಕೃತಿಯ ಸಹಜ ಸವುಂದರ್ಯವನ್ನು ಸವಿಯುತ್ತ, ತಮ್ಮ ಬಿಡದಿ ಯಾವುದಿರಬವುದೆಂದು ಪರಪಾಟು ಅನುಭವಿಸಿದವು. ಅವು ಹಂಗೆ ತಿರುಗಾಡಿಕೋತ, ತಿರುಗಾಡಿತ ಅದೇ ಕಾಸರಕನಡವೇಲಿ ಬೀಡು ಬಿಟ್ಟಿದ್ದವು. ತಾವು ಯಾವುದಾದರೊಂದು ಪ್ರಾಣಿಯ ಸರೀರದಲ್ಲಿ, ಮನಸಿನಲ್ಲಿ ಆಸ್ರಯ ಪಡೆಯಲಕೇ ಬೇಕು, ಯಿಲ್ಲವಾದರೆ ತಮಗೆ ವುಳಿಗಾಲವಿಲ್ಲ ಯಂದು ಮುಂತಾಗಿ ಯೋಚಿಸುತಲಿದ್ದ ಅವುಗಳ ಕಣ್ಣಿಗೆ ಆಹಾರಕ್ಕಾಗಿ ಹುಡುಕಾಟ ನಡೆಸುತಲಿದ್ದ ಅಂಜಣಿ ಕಣ್ಣಿಗೆ ಬಿತ್ತು. ಅಗೋ ಆ ಚುತುಷ್ಪಾದಿಯೊಳಗೆ ಸೇರಿಕೊಳ್ಳೋಣವೇ ಯಂದು ಮುಖಂಡನಾದ ಪ್ರೇಮವು ಹೇಳಿತು. ಹೋಗಿ ಹೋಗೀ ಆ ಮಂಗನಲ್ಲಿ ಆಸ್ರಯ ಪಡೆವುದೇ ಯಂದು ಕಾಮ, ಸಲ್ಲಾಪ, ರುದಯಮಂದಿರವೇ ಮೊದಲಾದ ಸದಸ್ಯರು ತಕರಾರು ಯತ್ತಿದವು. ಅದಕುತ್ತರವಾಗಿ ಪ್ರೇಮವು “ಚತುಷ್ಪಾದಿಯೋ.. ದ್ವಿಪಾದಿಯೋ? ನಮಗೆ ಮಾನವರೇ ಆಗಬೇಕೆಂದಿಲ್ಲ ಕಣರಯ್ಯಾ.. ನಮ್ಮನ್ನು ಚತುಷ್ಪಾದಿಗಳು ನೋಡಿಕೊಳ್ಳುವಷ್ಟು ಪ್ರೀತಿಯಿಂದ ಮಾನವರು ನೋಡಿಕೊಳ್ಳುವುದಿಲ್ಲ ಯಂಬುದನ್ನು ಮರೆಯಬ್ಯಾಡಿರಿ. ಅದಲ್ಲದೆ ನಮಗೆ ತುರ್ತಾಗಿ ಯಾವುದಾದರೊಂದು ಬಿಡದಿ ಬೇಕಾಗಿರುವುದು. ಯಿಲ್ಲದಿದ್ದಲ್ಲಿ ನಮಗೆ ವುಳಿಗಾಲ ಯಿಲ್ಲ ವಪ್ಪಿಕೊಳ್ಳಿರಿ” ಯಂದು ತಮ್ಮ ಯಿಷಮ ಪರಿಸ್ಥಿತಿಯನ್ನು ಮನೋಗ್ನವಾಗಿ ಯಿವರಿಸಿ ಅವರನ್ನೆಲ್ಲ ವಪ್ಪಿಸಿತು. ಸೇರಿಕೊಳ್ಳುವುದಾದರೂ ಹೆಂಗೆ? ತಮ್ಮ ಅದ್ರುಸ್ಟಮೋ ಯಂಬಂತೆ ಅದು ಆಹಾರಕ್ಕಾಗಿ ಹುಡುಕಾಟ ನಡೆಸಿರುವುದು. ಅಗೋ ಅಲ್ಲಿ ಕೆಂಪಗೆ ಥಳಥಳ ಹೊಳೆ ಯುತ್ತಿರುವ ಕಾರೆಹಣ್ಣುಗಳೊಳಗೆ....ತಡಮಾಡದೆ ಅವೆಲ್ಲ ಆ ಕೂಡಲೆ ಕಾರೆ ಹಣ್ಣುಗಳಲ್ಲಿ