“ಸ್ರೀರಾಮಚಂದ್ರಾಸ್ರೀರಾಮಚಂದ್ರಾ” ಯಂದು ವಾನರಸ್ರೇಷವಿನಿಗೆ ಪ್ರಣಾಮ ಸಲ್ಲಿಸಿದರೂ ಕೂಡ.
ಪ್ರದರ್ಸನದ ಮ್ಯಾಲ ಪ್ರದರ್ಸನ ನಡದೂ, ನಡದೂ ರೊಕ್ಕದ ಮಳೆಯೊಳಗೆ ಮಿಂದೂ, ಮಿಂದೂ ವಪ್ಪತ್ತಯ್ಯ ಯಿಪ್ಪತ್ತಯ್ಯ ಆಗಿಬಿಟ್ಟನು. ಯಿನ್ನೂ ಅತ್ತತ್ತ ಕಲಾಯಿದರೊಳಗೆ ಮಕುಟಪ್ರಾಯದಂತಿದ್ದ ವುಪ್ಪರಿಗೆ ಮನೆಯೊಳಗೆ...
ಯಿನ್ನು ಮಂದೆ ಹೆನ್ರಿಸಾಹೇಬನು ಚಿನ್ನಾಸಾನಿಯ ಗೊಡವೆಗೆ ವಾಪಸು ಬರಲಕ ಸಾಧ್ಯಯಿಲ್ಲ ಯಂದೂ.. ಪ್ರೇಮ ಕಾಮಸಂಬಂಧೀ ಭಾವನೆಗಳು ಆತನೊಳಗೆ ಪುಟ್ಟಂ ಪುರ್ತಿ ಮಾಯವಾಗಿರುವವೆಂದೂ ಸಾಸ್ತ್ರಿಗಳು ಹಿಂದೆಯೇ ಕಳುವಿದ್ದ ಮಾಹಿತಿಯನ್ನು ಮೆಲುಕು ಹಾಕುತ್ತ ಜಾವ ಜಾವಕ ನೆಮ್ಮದಿಯ ವುಸುರುಬಿಡುತ ಮಿಯಾ ಮಲ್ಹಾರ ರಾಗವನ್ನು ತಾಯಕ್ಕ ಮಂದ್ರಸ್ಥಾಯಿಯಲ್ಲಿ ಆಲಾಪಿಸುತ್ತಿರುವಾಗ್ಗೆ....
ಯಿನ್ನೊಂದು ಖೋಲಿಯೊಳಗ ಯಿದ್ದ ಚಿನ್ನಾಸಾನಿಯ ಬೊಗಸೆ ಗಣ್ಣುಗಳಲ್ಲಿ ಯಿರಹದುರಿ ಯೊಳಗಿಂದ ಮರಕಟವು ಪುರ್ಣ ಚಂದಿರನೋಪಾದಿಯಲ್ಲಿ ಅರಳಿರುವಾಗ್ಗೆ....
- * * *
ನಮ್ಮ ಜಾನಪದ ಗಾಯಕ ವರೇಣ್ಯರು ಸಾಂಬವಿಯ ಮ್ಯಾಲ ಯೇಟೊಂದು ಭಕುತಿ ಯಿಟುಗೊಂಡಾರಂದರ ಆಟೊಂದು ಭಕುತಿ ಯಿಟುಕೊಂಡಾರೆ ಸಿವನೆ, ದುರುಗೋಜಿ ತನ್ನ ನಾದಲಯ ಯಿನ್ಯಾಸದೊಳಗೆ ಮನುಷ್ಯನ ಮಂಗ್ಯಾನ ಮಾಡಿರುವನಲ್ಲದೆ ಮಂಗ್ಯಾನ ಮನುಷ್ಯಾನ ಮಾಡವನೆ, ಮರೆ ಗಿಡಗಳ ಕಯ್ಲಿ ಮಾತಾಡಿಸ್ಯಾನೆ.. ನಕುಲಯ್ಯ, ಸಹದೇವಯ್ಯರಂಥ ನೀಲಗಾರರು ತಮ ತಮ್ಮ ಹಾಡುಗಳೊಳಗ ಸಾಂಬವಿಯ ಕೋಪವನು ಮೂಡಲಕಂದರ ಅನಂತಪುರ ದಾಟಿ ಕಡಪಾ ತನಕ, ಪಡುವಲ ದಾಟಿ ದಾವಣಗೆರೆಯಿಂದ ವುಕ್ಕಡಗಾತ್ರೀಲಿ ನೆಲಗೊಂಡಿರುವ ಮಾ ಸರಣ ಕರುಬಸಜ್ಜಗೂ ದಯವದ ಕವುಡು ಬಿಡಸ್ಯಾರ.. ಚಿತ್ತಲವ್ವ, ಸವಾರವ್ವರೇ ಮೊದಲಾದ ಚವುಡಿಕೆಯವರು ತಮ ತಮ್ಮ ಹಾಡುಗಳೊಳಗೆ ಸಾಂಬವಿಯ ತಿಕ್ಕಡಿಯನು ಬಡಗಣಕ ಯಿರೋ ಕಲ್ಯಾಣದ ಬಸವಣ್ಣಗೂ ಬಿಡಸ್ಯಾರ.. ಹೀಂಗ ವಬ್ಬೊಬ್ಬರು ವಂದೊಂದು ರೀತಿ ವಳಗೆ.. ಸಿವ ಸಿವಾ ಹೇಳೂತ ಹ್ವಾದಲ್ಲಿ ನಲವತ್ತೊಂದು ಹಗಲುಗಳು ಸಾಲದು ಬಿದಾವು.. ನಲವತ್ತು ರಾತಿರಿಗಳೂ