ಸಾಯುಜ್ಯ ಹೊಂದಲು ಸದಾ ಹಾತೊರೆಯುತ್ತಿದೆಯಂಬುದು. ಯಿಂಡಿಯಾ ಅಂದರ ಜೀವ ಜಗತ್ತು, ಸಸ್ಯ ಜಗತ್ತು, ಮತ್ತು ಅಲವುಕಿಕ ಜಗತ್ತುಗಳ ತ್ರಿವೇಣಿ ಸಂಗಮ ಯಂಬುದು; ಭೂತಕಾಲದಿಂದ ಬೇರು ಪಡಿಸಿದಲ್ಲಿ ಯಿಂಡಿಯಾಕ್ಕೆ ಅಸ್ತಿತ್ವ ಯಂಬುದೇ ಯಿರುವುದಿಲ್ಲಯಂಬುದು. ಯೀ ಪ್ರಕಾರವಾಗಿ ಥಾಮಸು ಮನ್ರೋ ತನ್ನ ಮೇಲಾಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವಲ್ಲಿ ಸದಾ ತಿಪ್ಪರಲಾಗ ಹಾಕುತ್ತಿದ್ದನು. ಆದರೆ ಯೀ ಹಿಂದೆ ಘಟಿಸಿದ ಘಟನೆಯಿಂದಾಗಿ ತಾನು ಮತ್ತಷ್ಟು ಅಂಡಾವರನ ವಾಗಿದ್ದನು. ನೋಡಿದಿರಾ, ಯಿಂಡಿಯಾ ಅಂದರೆ ಯಿದು ಯಂಬ ತೀರುಮಾನಕ್ಕೆ ಲಗತ್ತಿಸಿಕೊಂಡಿದ್ದ. ಆದರೂ...
ತಾನು ಮೊದಲೇ ಹೇಳಿ ಕೇಳಿ ಯಿದೇಸೀ ಮನುಷ್ಯ.. ತನ್ನ ಮನದೊಳಗ ಒಂದು ಪ್ರಸ್ನೆಯ ಮರ, ಅದಕ ನೂರಾರು ವುಪಪ್ರಸ್ನೆಗಳೆಂಭೋ ಕೊಂಬೆರೆಂಬೆಗಳು. ತಾನೆಂದರೆ ಪ್ರಸ್ನೆ.. ಪ್ರಸ್ನೆ ಅಂದರೇ ತಾನು.. ಯಂಬುವಷ್ಟರ ಮಟ್ಟಿಗೆ.. ಸದರಿ ಯಿಂಡಿಯಾವು ತಾನೇನು ಯಂಬುದನು ಸದರಿ ಮನ್ರೋ ಸಾಹೇಬಗೆ ಸಾಬೀತು ಮಾಡಲು ಪ್ರತಿ ಛಣ ಹಾತೊರೆಯುತಲಿತ್ತು. ಮುಂದ ಮುಂದ ವಂದಲ್ಲಾ ವಂದಿವಸ ಕುಂಪಣಿ ಸರಕಾರವು ಯಿಲ್ಲಿನ ಪ್ರಜೆಗಳನ ಆಳಬೌದೇ ವಿನಾ ಸಹಸ್ರಾರು ಪವಾಡಗಳ ಬಸುರು ಹೊತ್ತಿರು ವಂಥ ನೆಲವಾದ ನನ್ನನ್ನು ಅಳಲಾರದು ಯಂದು ಠೇಕಾರದಿಂದ ಯಚ್ಚರಿಸುತ್ತಿರುವಂತೆ, ನಾನು ಕೇವಲ ಮಣ್ಣಲ್ಲ ಕಣಪ್ಪಾ.. ನನ ಮಣ್ಣ ಕಣ ಕಣದೊಳಗೆ ಯೇನಿಲ್ಲ ಅಂದರೆ ಯೇನೂ ಯಿಲ್ಲ.. ವುಂಟು ಅಂದರ ಯಲ್ಲಾ ವುಂಟು.. ನನ್ನ ತಂಟೆಗೆ ಬರಲು ನಿನಗ ಯಂಟೆದೆ ಬೇಕು. ನಿನ್ನ ನೀ ಬಲಿಕೊಡಲು ಸಿದ್ಧಯಿರುವುದಾದರ.. ನಾನೇನೆಂಬುದನು ನಿನಗ ತೋರಿಸುವೆನು.. ಯಂದು ಸವಾಲು ಹಾಕುತ್ತಿರುವಂತೆ ಸದರೀ ಸಾಹೇಬನಿಗೆ ಭಾಸವಾಗುತಲಿತ್ತು. ಯಲ್ಲದೀ? ಹ್ಯಾಂಗದೀ ಅಂತ ನೀ ನನ್ನ ಕೇಳಿದೀ ಅಂತ ಯಿಟ್ಟುಕೋ ಅದಕ ನನ ಜವಾಬು ಯೇನಯಿತಪ್ಪಾ ಅಂದರ.. ಯೀ ನೆಲದ ಮ್ಯಾಲ ಕಾಲೂರಿ ಯೀ ನೆಲವನ್ನವಲಂಬನ ಮಾಡಿ ಬದುಕುವ ಚರಾಚರದೊಳಗ ನಾನಿರುತೀನಿ.. ಅವರ ಚಲನ ವಲನ ನಂದೇ ಆಗಿರುತದss.. ಸಚರಾಚರದ ಸೂತಕ ಯಿರೋದು ನನ ಕಯ್ಯಲ್ಲಿ ಅಂಬುದನು ಮರೀಬ್ಯಾಡಪ್ಪಾ.. ನೆಲದೊಡನಾಡಿಗಳೂ.. ಬಾನಾಡಿಗಳೂ, ನನಗ ಕಳ್ಳು ಸೇರುವಿಕೆ ಅದಾವ.. ಕಾಗೆಯ ಕಾವ್ ಕಾವ್ ಕಾವ್, ಗೂಬೆಯ ಗೂಗುಕ್ ಗೂಗುಕ್.. ಗುಬ್ಬಿಯ ಚಿಂವ್ ಚಿಂವ್ ಯಿವೇ ಮೊದಲಾದ ಭಾಷೆಗಳು ನನ್ನ