ವಿಷಯಕ್ಕೆ ಹೋಗು

ಪುಟ:Aramane.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಡೇಕ ಸವುಡು ಮಾಡಿಕೊಂಡು ತಾನು ಹೋಗದೆ ಯಿರುತಲಿರಲಿಲ್ಲ. ಮಾರಿ ಮಸಣಿ ಹೊಂಡಿಸೋರ ಮಾರಿಗೆ, ಅಗಸೆ ಬಾಕುಲು ಪೂಜೆ ಮಾಡೋರ ಮಾರಿಗೆ, ಹಬ್ಬಹರಿದಿನ ಮಾಡೋರ ಮಾರಿಗೆ ತಾನು ಸವುಡು ಮಾಡಿಕೊಂಡು ಹೋಗದೆಯಿರುತಲಿರಲಿಲ್ಲ. ದತ್ತ ಮಂಡಲದ ಪಯ್ಕಿ ಕಡಪ ಅನಂತಪುರಗಳ ಆಜು ಬಾಜೂಕಿದ್ದ ಪ್ರತಿಯೊಂದು ಗ್ರಾಮವು ಆತನ ಬರುವಿಕೆಗಾಗಿ ತುದಿಗಾಲಲ್ಲಿ ನಿಂತು ಯಾವಾಗ ಬರುವನೋ ನಮಪ್ಪ ಯಂದು ಯದುರು ನೋಡುತಲಿತ್ತು. ವಂದೇ ಮಾತಲಿ ಹೇಳಲಕಂದರ ದತ್ತ ಮಂಡಲದ ಹಳ್ಳೀ ಮಂದಿಗೆ ಮನ್ರೋ ಯಂಬ ತಿಕ್ಕಡಿ ಬಡಕಂಡಿತ್ತು. ಅವಯ್ಯನ ಜಪ ಮಾಡಿಕೋತ ಮಲಗುತಲಿತ್ತು, ಯೇಳುತಲಿತ್ತು. ಸಿಂಧವಾಡಿ ಸೀಮೆಯ ವುಳ್ಳವರ ಕಣ್ಣಿಗೆ ಮನ್ರೋನು ವುರುಕುಂದಿ ಯೀರಣ್ಣನ ಅಪರಾವತಾರವೆಂಬಂತೆ ಗೋಚರಿಸಿದರೆ, ಅನಂತಪುರ ಸೀಮೆಯವುಳ್ಳವರು ಕದಿರಿ ನರಸಿಮ್ಮ ಸೋಮಿಯೇ ಮನ್ರೋನ ಯಾಸದಲ್ಲಿ ಯಿರುವನು ಯಂದೇ ಭಾವಿಸಿದ್ದರು. ಬಲಕುಂದಿಯ ಪರಗಣಸೀಮೆಯ ಆರಾಧ್ಯ ದಯವವಾದ ಹಳೇಕೋಟೆ ಯೀರಭದ್ದರದೇವರೂ, ಬಲುನಾಡು ಪ್ರಾಂತದ ಲಚುಮೀನರಸಿಮ್ಮ, ಕುಂತಳ ಪ್ರಾಂತದ ವುಗ್ಗರನರಸಿಮ್ಮ ಯಿವೇ ಮೊದಲಾದ ಯಿಟ್ಟರೆ ಸಾಪ, ಕೊಟ್ಟರೆ ವರ ಜಾಯಮಾನದ ದೇವರುಗಳು ಮನ್ರೋನ ಸರೀರದೊಳಗೆ ಆಸ್ರಯ ಪಡಕೊಂಡವೆ ಯಂದು ವುಂಡು ವುಗುಳೋರೆಲ್ಲ ನಂಬುತಲಿದ್ದರು. ದತ್ತ ಮಂಡಲದ ಗವುಡ, ರೆಡ್ಡಿ, ಪಟುವಾರಿ, ಜಾಗೀರಿ, ಪಾಟಿಲು, ಪಟೇಲಾದಿಗಳ ಪಯ್ಕಿ ವಬ್ಬರಲ್ಲಾ ವಬ್ಬರು ಮನ್ರೋನ ಹೆಸರಲ್ಲಿ ಮಾಟ ಮಂತರ ಮಾಡಿಸೀ ಮಾಡಿಸೀ ಸುಸ್ತಾಗಿದ್ದರು. ಮಾಟಗಾರ, ಮಂತರಗಾರ, ಮೋಡಿಕಾರರಿಗೆ ತಮ ತಮ್ಮ ಯಿಲಾಖಾದೊಳಗೆ ಕಣ್ಣಳತೆ ಕೂಗಳತೆಯಲ್ಲಿರಿಸಿ ಕೊಂಡಿದ್ದರು. ಅವರ ವಾಮಾಚಾರದ ವುದ್ದೇಶ ಬರೀ ಕಲೆಟ್ರುಸಾಹೇಬ ಆಗಿರಲಿಲ್ಲ. ವಬ್ಬರೊಬ್ಬರ ವರ್ಚಸ್ಸು ಕುಂದಿಸಲು, ಅಂಗಾಂಗಗಳನ್ನು ವÆನಮಾಡಲು, ನಾಶ ಮಾಡಲು ಮಂತರ ಮಾಟಗಳ ಮೊರೆ ಹೋಗುತಲಿದ್ದರು. ಯೀ ಸಂಗತಿ ಮನ್ರೋ ಸಾಹೇಬನಿಗೆ ಗೊತ್ತಿರಲಿಲ್ಲ ಯಂದಲ್ಲ. ಆ ಯಲ್ಲ ವುಪಟಳವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತಲಿದ್ದನು. ಅಲ್ಲದೆ ಮಂತರಗಾರಿಕೆ, ಮೋಡಿಗಾರಿಕೆ ಯೀ ಎಲ್ಲ ಯಿದ್ಯೆಗಳನ್ನು ಕಲಾಪ್ರಕಾರಗಳ ಪಯ್ಕಿ ವಂದೆಂದೇ ತಾನು ಭಾವಿಸಿದ್ದನು. ಅಂಥವರನ್ನು ತಾನಿದ್ದಲ್ಲಿಗೆ ಬರಮಾಡಿಕೊಂಡು ಸತ್ಕಾರ ಮಾಡಿ ಗವುರವಿಸುತಲಿದ್ದನು. ಅಂಥ ಪ್ರಯೋಗಗಳಿಗೆ ತನ್ನನ್ನು ತಾನು ವಡ್ಡಿಕೊಂಡು