ಗುಂಡಲಹಳ್ಳಿ ರಾಜ ಹಂಗಜ್ಜನೂ, ಆಜಡ್ಲುವಿನ ರಾಜ ನನ್ನಲುಪಾಲನಾಯಕ, ದೂಪದಳ್ಳಿಯ ರಾಜ ಜುಮ್ಲಾನಾಯಕ, ಖುದ್ದ ಹಸ್ತಾಕ್ಷರದ ನಿರೂಪವನ್ನು ಸಂಗಾಟ ತಂದಿದ್ದ ರಾಯಭಾರಿ ರೊಟ್ಟೆಲುಕಾಲಯ್ಯ ಯಿವರೇ ಮೊದಲಾದವರಿದ್ದರು. ಯಿಂಥ ಸ್ಥಿತಿ ನಡುವೆಯೂ ಪರಸ್ಪೂರ ದ್ರುಸ್ಟಿಯುದ್ದ ಮಾಡುತ ತಮ್ಮ ತಮ್ಮ ಕಿವಿಗಳನ್ನು ಅರಮನೆ ವುದ್ದಗಲಕ್ಕೂ ಚಾಚಿ ಬೆಕ್ಕುಗಳ ಮ್ಯಾವ್.. ವ್ಯಾಮ್.. ಕುರಿಮೇಕೆಗಳ ಮಹೆಹೆಹೆ.. ಗಿಳಿಗಳ ಚುವ್.. ಚುವ್.. ಕೋಳಿಗಳ ಕೊ. ಕ್ಕೋ.. ಕೋ... ಬಳೆಗಳ ಘಿಲ್.. ಘಿಲ್.. ಕಾಲುಗೆಜ್ಜೆಗಳ ಘಲ್.. ಘಲ್.. ಸೆರಗುಗಳ ಸೆರಕ್.. ಸೆರಕ್.. ಹಸುಗೂಸುಗಳ ಅವ್ವವ್ವಾ.. ಗಂಟೆಯ ಗಣಗಣಲ್.. ಯಿವೇ ಮೊದಲಾದ ಸಬುಧಗಳನ್ನಾಲಿಸುತಲಿದ್ದರು. ತಮ ತಮ್ಮ ಕಣ್ಣುಗಳನ್ನು ತೂರಾ ಪುಟ್ಟಿ ಗಾತುರಕ್ಕಗ್ಗಲಿಸಿ ಹರುಕು ಮುರುಕು ಸುಣ್ಣ ಬಣ್ಣದ ಗೋಡೆಗಳನ್ನೂ.. ಗೋಡೆಗಳಿಗಂಟಿದ್ದ ಸೋಮ ವಮುಸದ ರಾಜ ಮಾರಾಜರ, ಪಾಂಡವರು ಕವುರವರು ಜೂಡಾಡುತ್ತಿರುವ, ದ್ರವುಪದಿಯ ವಸ್ತರಾಪಹರಣದ.. ನಳದಮಯಂತಿಯರ ಯಿವೇ ಮೊದಲಾದ ತಯ್ಲವರ್ಣದ ಚಿತ್ರಗಳನ್ನೂ.. ಬಗೆಬಗೆ ಯಿನ್ಯಾಸದ ಲಾಂದರಗಳನ್ನೂ.. ಮೂಲೆ ಮೂಲೆಯೊಳಗೆ ಯಣಕಂಡಿದ್ದ ಜೇಡರ ಬಲೆಗಳ ಕಲಾಕ್ರುತಿ ಗಳನ್ನೂ ಆಸ್ವಾದಿಸುತಲಿದ್ದರು.. ಆಗೋಮ್ಮೆ ಯಿಗೊಮ್ಮೆ ಪ್ರಹರಿ ಬಂದು ರಾಜನ ನಿತ್ಯಕರುಮ ಗಳನ್ನು ಯಿವರಿಸಿ ಹೋಗುತಲಿದ್ದನು.
ವಂದುಗಳಿಗೆ ಆತು, ಯರಡುಗಳಿಗೆ ಆತು, ಬರೋಬ್ಬರಿ ಮೂರುಗಳಿಗೆ ಆತು ಯಂಬುವಷ್ಟರಲ್ಲಿ ಪರಿಚಾರಕನೋರ್ವ ಬಂದು ಸಿಮ್ಮಾಸನದ ಮ್ಯಾಲ ಮೆತ್ತೆ ಹಾಸಿ ಹಿಂದಕ ಮುಂದಕ ಹೊಳ್ಳಾಡಿಸಿ, ಅದರ ಕಾಲುಗಳ ಗಟ್ಟಿತನವನ್ನು ಪರೀಕ್ಷಿಸಿ, ಹೋದ ಸೊಲುಪ ಹೊತ್ತಿಗೆ.. ಅಂತಾಪ್ರದ ದ್ವಾರದ ಜಾಗಟೆ ಢಣೀರೆಂದು ಭಾರಿಸಿದ ಸೊಲುಪ ಹೊತ್ತಿಗೆ.. ಯಿರ್ರಾಜು ಯಂಬ ಹೊಗಳು ಭಟ್ಟಾರಕನು ಬಂದು ಅಂತಸಹಾಯಸೂರಾss ಸಣಿವಾರ ಸಿದ್ದಿ, ಮಿಂಚೇರಿ ಗಿರಿದುರ್ಗಮಲ್ಲ...ಛಲದಂಕಮಲ್ಲss ಸಮಾದಿsಗತ ಪಂಚಮಹಾಸಬ್ಧ ಮಹಾಮಂಡಲೇಸ್ವರ.. ಮಿಂಚೇರಿ ಪುರಾದೀಸss.. ಸೋಮ ವಂಸ ಕುಲತಿಲಕss.. ವಸುಧಾಕರ ಚಕ್ರಕೂಟ.. ಕೋಟಿ... ಯಿಯಿಧ ಯಿಧಾನ.. ರಿಪುಜಲದಿs.. ಬಡಬಾನಳss.. ಸವುರ್ಯ ಮ್ರುಗರಾಜಕುಲಪಾಲನ.. ವಜ್ರದಂಡss.. ಮಲೆ ಪರ್ಗೊಳ ಗಂಡss.. ಯಿಯಿಧ ಯಾಚಕ ಜನಯ್ಕ ಚಿಂತಾಮಣಿ.. ಸಮ್ಯಕ್ತ್ವ ಚೂಡಾಮಣಿ..