ಯಿಯೇಕ ಕಮಲಾಸನss.. ಚಲದಂಕ ಪ್ರತಾಪೀss.. ಸ್ರೀ ಮದ್ರಾಜಾದಿsರಾಜ ಜಾಲಿ ಮಂಚಯ್ಯ ನಾಯಕಾ ಭೋಪರಾಕ್.. ಭೋಪರಾಕ್... ಯಂದು ಹಾಡಿ ಹೊಗಳಿದ ಸೊಲುಪ ಹೊತ್ತಿಗೆ.. ಅರಸನು ತನ್ನ ಸ್ಥೂಲ ಸರೀರವನ್ನು ಯಿಬ್ಬರಾಸರೆ ಯಲ್ಲಿ ನಡೆಸಿಕೋತ.. ನಡೆಸಿಕೋತ ಆಗಮಿ ಸುತ್ತಲೆ.. ಯಲ್ಲಾರು ಯದ್ದು ನಿಂತು ಗವುರವ ತೋರಿಸಿ ಕೂಕಂಡರು. ಸಿಮ್ಮಾಸನಾರೂಢಗೊಂಡ ರಾಜನು ಸಿಮ್ಮಾವಲೋಕನ ಮಾಡಿದ ಸ್ರಮ ದಿಂದಾಗಿ ಕೆಮ್ಮಿ ಸಾವರಿಸಿಕೊಂಡನು.....
ಪ್ರಧಾನಿ ನರಸಪ್ಪಯ್ಯ ಅರಮನೆಯ ರೀತಿ ರಿವಾಜು ಪ್ರಕಾರ ಆಸ್ಥಾನವನ್ನುದ್ದೇಸಿಸಿ ನಾಕು ಮಾತಾಡಿದರು. ರಾಜರುಗಳು, ರಾಯಭಾರಿ ಗಳು ತಮ ತಮ್ಮ ಪರಿಚಯ ಹೇಳಿಕೊಳ್ಳತ ಕುರಿ, ಕೋಳಿ, ಮೊಲ, ಸೆಲ್ಲೇವು, ಜೇನು ತುಪ್ಪ, ಯೀರ್ಯವರ್ದಕ ಲೇಹ್ಯ ಯಿವೇ ಮೊದಲಾದ ಕಪ್ಪ ಕಾಣಿಕೆ ಅರ್ಪಿಸಿದರು.. ಪಂಚರ ಪಯ್ಕಿ ಅಡಿವೆಜ್ಜನು ತಮ್ಮ ಖೂನು ಗುರುತು ಹೇಳಿಕೊಂಡು ಟೊಂಕ ದಿಂದ ಕಂಚಿನ ಭರಣಿಯನ್ನು ತೆಗೆದು ಅರ್ಬಿಸುತ್ತ “ಮಾ ಪ್ರಭು.. ಯಿದರೊಳಗೆ ತಾಯಿ ಸಾಂಬವಿಯ ಪರಸಾದವುಂಟು.. ಯಿದನ್ನು ದಿನಕಯ್ದು ಬಾರಿ ಸೇವಿಸಿ ಆಯುರಾರೋಗ್ಯ ವರ್ಧನೆ ಮಾಡಿ ಕೊಳ್ಳುವುದು” ಯಂದು ಹೇಳುತ ಸಮುಯ ಪ್ರಗ್ನೆ ಮೆರೆದನು. ರಾಜನು ಸಾಯಕರ ಸಾಯದಿಂದ ಸಿಮ್ಮಾಸನದಿಂದೆದ್ದು ಪರಸಾದ ಸ್ವೀಕರಿಸಿದನು ಯಂಬಲ್ಲಿಗೆ.. ಸಿವಸಂಕರ ಮಾದೇವಾss..
ಯಂಥ ಭಾಗ್ಯವಂತರು ಜಾಲಿಮುಚಯ್ಯ ನಾಯಕರು.. ತಾಯಿದ್ದಲ್ಲಿಗೇ ತಾಯಿ ಪರಸಾದ ಬರುವುದೆಂದರೇನು?
ಸಭೆ ತಾಸು ಪರ್ಯಂತರ ನಡೆದು ಬರ ಖಾಸ್ತಾಯಿತು. ರಾಜ, ರಾಯಭಾರಿ ಮೊದ ಲಾದವರು ರಾಜನಿಗೂ, ತಾಯಿವಕ್ಕಲು ಮಕ್ಕಳಿಗೂ ಪ್ರಣಾಮ ಸಲ್ಲಿಸಿ ವಾಪಸಾದರು. ರಾಜ ಪಂಚರನ್ನು ಮಂತರಾಲೋಚನೆಗೆಂದು ತನ್ನ ದಿವಾನಖಾಸಾಕ್ಕೆ ಕರೆದು ಕೊಂಡೊಯ್ದನು. ಕುಡಿಯಲಕ ಬೆಲ್ಲ, ನೀರುಕೊಟ್ಟು ಸತ್ಕಾರ ಮಾಡಿ ತನ್ನಿಂದೇನಾಗಬೇಕು ಯಂದು ಕೇಳಿಕೊಂಡನು. ಪಂಚರು ಯಿಶದವಾಗಿ ಯಿವರಿಸಿ ತಾವು ಬಂದಿರೋ ಕಾರ್ಯ ನಿವೇದಿಸಿಕೊಂಡರು. ಜಗಲೂರೆವ್ವನ ಹಣೆಯ ಕುಂಕುಮ ಬೊಟ್ಟಿಳುವಿ.. ಮಾಂಗಲ್ಯ ಪದಕವ ಕಸಿದು ಕೊಟ್ಟಲ್ಲಿ ಯಿಂತಿಷ್ಟು ಕಾಣಿಕೆ ಕೊಡುವುದಾಗಿ ಹೇಳಿದರು. ಯಿಂಥ ಪಾಪಕಾರ್ಯವನ್ನು ರಾಜ ನಾದವನು ಮಾಡುವುದರಿಂದ ಬರುವ ಪಾಪಗಳಾವುವು?