ವಿಷಯಕ್ಕೆ ಹೋಗು

ಪುಟ:Aramane.pdf/೬೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫೫

ಅರಮನೆ

ಆರು ಸಾವಿರಕ್ಕೆ ತಲುಪಿತ್ತು.. ದಿಂಡುರುಳುವಿಕೆ ಸೇವೆ, ಪಾದಯಾತ್ರೆಸೇವೆ.. ಹೆಳವರಾಗುತೇವೆ ಅನಕೊಂಡಿದ್ದವರಂತೂ ಅಸಂಖ್ಯಾತ... ಸವಾರಿ ಬಂಡೀಲಿ ಬಂದಿಳಿದಿದ್ದ ಜಗಲೂರೆವ್ವ ಬಸುರಿಯ ಮಾಯಾವಿ ದ್ವಾರಕ್ಕ ಕಯ್ಯಿಟ್ಟು ಕುಂತು ಯರಡು ಮೂರು ದಿವಸಗಳೇ ಜರುಗಿದ್ದವು.. ವಾತ ಪಿತ್ಥ ಕಫ ನಾಡಿ ತಗ್ನರಾದ ವೈಯ್ದರುಗಳು ಬಾಣಂತಿಯ ನೋವಿನಾಲಾಪನೆಗಳಿಗನುಸಾರವಾಗಿ ಕಷಾಯ ತಯಾರು ಮಾಡುತ ಗಳಿಗ್ಗಳಿಗ್ಗೆಮ್ಮೊಮ್ಮೆ ನಿಟ್ಟುಸಿರು ಬಿಡಲಾರಂಬಸಿ ನಾಲಕಯ್ದುದಿವಸಗಳು ಜರುಗಿದ್ದವು.. ಅತ್ತೆ ಮಾವಂದಿರ ದುಕ್ಕ ಮುಗುಲಿಗೆ ಮುಟ್ಟಿತ್ತು, ಗಂಡ ಕಲಿಯೀರ ನಾಯಕನಂತೂ ದುಕ್ಕವ ಮಾಡೀ ಮಾಡೀ ನೆಲದ ಪಾಲಾಗಿ ಬಿಟ್ಟಿದ್ದನು. ಸೂಲಗಿತ್ತೇರು ಆಗೊಮ್ಮೆ ಯೀಗೊಮ್ಮೆ ಹೊರಗಡೀಕೆ ಬಂದು ಬೆಮರೊರೆಸಿಕೊಳುತ “ಮುಂದಕ ಬರೋದು ಸರ್ರಂತ ಹಿಂದಕ ಜರುಗೋದು ಮಾಡಲಾಕ ಹತ್ತಯ್ತೆ ಕೂಸು.. ಕಾಲು ಕೊಡೂ ಅಂದರ ತೆಲೀಯ ಕೊಡುತಯ್ತೆ.. ತೆಲೀಯಕೊಡೂ ಅಂದರ ಕಾಲನು ಕೊಡಲಾಕ ಹತ್ತಯ್ತೆ ಕೂಸು.. ದ್ವಾರಕ್ಕೆ ಬಂದು ಅಡಡ್ಡ ಮಲಗತಯ್ತೆ ಕೂಸು... ಅಳ್ಳೋಗ ಬ್ಯಾಡೂರಿ.. ದ್ಯಾವರ ಮ್ಯಾಲ ಭಾರನ ಹಾಕಿ, ಚಿಂತೆ ಮಾಡದಿರಿ”ಯಂದು ದಯರ್ಯ ತುಂಬೂತ ವಳಗೆ ಹೋಗುತಯ್ದಾರೆ....

ವಬ್ಬೊಬ್ಬರು ತಮ ತಮ್ಮ ಪುರುವಾಪರಗಳನ ಬೆದಕಿ ನೋಡುತಿರುವ ಕಾಲಕ್ಕೆ.. ಆಗಲೇ ಬಂದಿಳಿದಿದ್ದ ಮಂತರವಾದಿಗಳು ಅತಿಮಾನುಸ ಸಗುತಿಗಳಿಗೆ ದಿಗ್ಭಂದನ ಹಾಕುತಿರುವ ಕಾಲಕ್ಕೆ.. ಮ್ಯಾಸ ಬ್ಯಾಡರು ತಮ ಕುಲದಯವಂಗಳಾದ ಚಿತ್ತಯ್ಯ, ಪಾಲಯ್ಯ, ಗಾದಿರಯ್ಯಂಗಳನು ಸ್ತುತಿಸುತಿರುವ ಕಾಲಕ್ಕೆ.. ಕಾಡುಗೊಲ್ಲರು ತಮ ತಮ್ಮ ಕುಲದಯವಂಗಳಾದ ಯತ್ತಯ್ಯ, ಜಂಜಯ್ಯಗಳನು ನೆನೆಯುತ್ತಿರುವ ಕಾಲಕ್ಕೆ.. ಕೋಮಟಿಗ ಮಂದಿ ತಿರುಪತಿಯ ಯಂಟರಮಣ ಸೋಮಿಯ ಜಪ ಮಾಡುತಿರುವ ಕಾಲಕ್ಕೆ, ತಮ ತಮ್ಮ ಬೇರುಗಳನುಪಸಮ್ಮರಿಸಿಕೊಂಡು ಗಿಡಮರಗಳು ಬಾಡುತಿರುವ ಕಾಲಕ್ಕೆ.. ನಾಯಿ ನರಿಗಳು ವÆಳಿಡುತಿರುವ ಕಾಲಕ್ಕೆ.. ಹೆಜ್ಜೆ ಹೆಜ್ಜೆ ಗೊಂದೊಂದರಂತೆ ಹುಟ್ಟಿಕೊಂಡ ಸುಂಟರಗಾಳಿಗಳು ಅಂಡಲೆಯಲಾರಂಬಿsಸಿದ ಕಾಲಕ್ಕೆ.. ಸಂಕಲನ ಯವಕಲನಗಳು ಬದಲಾಗುತಿರುವ ಕಾಲಕ್ಕೆ.. ಆಡುವ ಭಾಷೆ ಯಾಕರಣ ಕಳಕೊಂಡಿರುವ ಕಾಲಕ್ಕೆ.. ಗದ್ಯ ಪದ್ಯವಾದ ಕಾಲಕ್ಕೆ.. ಪದ್ಯ ಗದ್ಯವಾದ ಕಾಲಕ್ಕೆ... ಅರಮನೆಗೆ ಅರಮನೆಯೇ ನೋವಿನ ಸಾಕಾರ ಮೂರ್ತಿಯಾಗಿರುವ ಕಾಲಕ್ಕೆ...