೬೫೯
ಅರಮನೆ
ಬಂದ ಬಂದವರೆ ಸಾಲಂಕ್ರುತ ಕಳೇಬರದೆದುರು ಅಳುವ ಸುಸ್ರಾವ್ಯ ಕಾರ್ಯೇವನ್ನು ತಾರಕ ಸೊರದಲ್ಲಿ ಆರಂಭಿಸದಿದ್ದಲ್ಲಿ ಯಿನ್ನೆಷ್ಟು ಅನಾಹುತಗಳು ಸಂಭವಿಸುತ್ತಿದ್ದಮೋ? ಅವರ ಅಳುವಿನ ಕರೆಗೆ ಓಗೊಟ್ಟು ಸರಸ್ಸೊತಿಯ ನಾನಾ ರೂಪಗಳು ನಾಮು ತಾಮುಂದೂಂತ ಬಂದು ಅವರೆಲ್ಲರ ನಾಲಗೆಗಳ ಮ್ಯಾಲ ಯಿಂಬು ಪಡಕೊಂಡ ಮ್ಯಾಲಂತೂ ಡಣಾಪುರದ ಚಹರೆಯೇ ಬದಲಾಗಿ ಬಿಟ್ಟಿತು. ದುಕ್ಕದ ನಾದದ ನದಿಯೇ ಬೊರ್ಗರೆಯ ಲಾರಂಬಿsಸಿತು. ಅದು ಅಳುಮೋ? ಅಳುವಿನ ರೂಪದ ಸಂಕೀರ್ತನಮೋ? ಅವರ ಅಳು ಯಷ್ಟು ಪವಾಡ ಸದ್ರುಸವಾಗಿತ್ತೆಂದರೆ ಚಿನ್ನಾಸಾನಿ ಕಳೇಬರದ ಮುಖಾರವಿಂದ ಅಪುರ್ವ ಲಾವಣ್ಯದಿಂದ ಕಂಗೊಳಿಸ ತೊಡಗಿತು.. ಬಾಯಿಗೆ ಅರಿವೇನ ಯಿಟುಕೊಂಡು ತದೇಕ ಚಿತ್ತದಿಂದ ನೋಡುತಲಿದ್ದ ಮಂದಿಗೆ ಕಳೇ ಬರದ ಕಣ್ಣಾಲಿಗಳು ಮಿಸುಕಾಡುತ್ತಿರುವಂತೆ ಭಾಸವಾಗಲಾರಂಭಿಸಿತು.. ಕಳೇಬರವು ಮಯ್ಯಿ, ಕಯ್ಯಿ ತುಂಬಿಕೊಂಡಂತೆಯೂ ಕೆಂದುಟಿಗಳ ನಡುವೆ ಮಂದಹಾಸ ನೆಲೆಗೊಂಡಿರುವಂತೆಯೂ ಭಾಸವಾಗಲು ಅನೇಕರು ನಮ್ಮವ್ವಯದ್ದು ಬರುತಾಳನ್ನಂಗದಾಳಲ್ಲ ಯಂದು ಬೋರಾಡಿ ಅಳತೊಡಗಿದರು ಸಿವನೇ.. “ನಗಬೇ ನಮ್ಮವ್ವನೇ.. ನಾಕೇ ನಾಕು ಮಾತಾಡಬೇ ನಮ್ಮವ್ವನೇ...” ಯಂದು ಅಂಗಲಾಚತೊಡಗಿದರು ಸಿವನೇ...
ಅವರು ಹಾಡ್ಯಾಡಿಕೊಂಡು ಅಳುತಲಿದ್ದುದು ಯಷ್ಟು ಪರಿಣಾಮಕಾರಿಯಾಗಿತ್ತೆಂದರೆ.. ಚಂದ್ರಗಿರಿ ಸೀಮೇಲಿ ಅಂಡಲೆಯುತಲಿದ್ದ ತಿಲ್ಲಾನ ತಾಯಕ್ಕಳ ಆತುಮವು ಮನೋವೇಗದಲ್ಲಿ ಡಣಾಪುರಕ್ಕೆ ಬಂದು ತನ್ನಷ್ಟೆ ವಯೋಮಾನದ ವಡಕವ್ವನ ಸರೀರದೊಳಗೆ ಆಶ್ರಯಪಡಕೊಂಡಳೋ ಪಡಕೊಂಡಳು. ಸಿವನೇ.. ಹಿಂಗss ಡಣಾಪುರ ಸಾಮ್ರಾಜ್ಯವನ್ನಾಳಿದ್ದಂಥ ಪುರುವಿಕರ ಆತುಮಗಳು ಯಲ್ಲಲ್ಲಿದ್ದಮೋ ಅಲ್ಲಿಂದಲೆ ಬಂದು ಅವರಿವರ ಸರೀರದೊಳಗೆ ವಂದರ ಹಿಂದ ವಂದರಂತೆ ಕಾಣಿಸಿಕೊಂಡ ಪರಿಣಾಮವಾಗಿ ಸಿವಸಂಕರ ಮಾದೇವಾ.. ವರ್ತಮಾನದೊಳಗೆ ಭೂತಕಾಲಮೋ.. ಭೂತಕಾಲದೊಳಗೆss ವರ್ತಮಾನಮೋ.. ಯಾದು ಹೊಸದೋ.. ಯಾದು ಹಳೇದೋ.. ಯಲ್ಲಾ ಅಯೋಮಯವಾಯಿತು ಸಿವನೇ...
ಬಂದ ಡೊಳ್ಳುಗಳೆಷ್ಟೋ.. ಬಂದ ಹಲಗೆ ತಮ್ಮಟೆಗಳೆಷ್ಟೋ.. ಬಂದ ಸಮಾಳ ನಂದಿ ಕೋಲು ಗಳೆಷ್ಟೋ..ಸಿಡಿಯಲಾರಂಬಿsಸಿದ ಮದ್ದು