೬೬೨
ಅರಮನೆ
ಹೆನ್ರಿಆಡಿದ ಮಾತು ಕೇಳಿ ಡಣಾಪುರದ ರಾಜಮನ್ತನಸ್ಥರು ಹೌಹಾರಿದರು.. ಪರಂಗಿಯವಗೆ ಅಯ್ಲು ಬಡಕೊಂಡಗಯ್ತೆ ಅನಕಂತ ಮಂದಿ ಮೂಗಿನ ಮ್ಯಾಲ ಬೊಳ್ಳಿಟ್ಟುಕೊಂಡರು. ತಮಗ ಪಿಂಚಣಿ ಕೊಡಮಾಡ್ತಿರೋ ಕುಂಪಣಿ ಅದಿsಕಾರೀನೆ ಹಿಂಗಾಡುತ್ತಿರುವನಲ್ಲಾ ಯಂದು ರಾಜನು ಗಿದ್ದುನ ಯಸನ ಮಾಡಿದನು. ಯಿನ್ನೊಬ್ರೆಂಡ್ತಿ ಹೆಣsನ ಬಗಸೋದು ಥರವಲ್ಲವೆಂದೂ.. ಇದರಿಂದ ಯಕ್ತಿತ್ವಕ್ಕೆ ಕಳಂಕ ತಗುಲುವುದೆಂದೂ.. ಯೀ ಸಂಗತಿಯೇನಾರ ಮನ್ರೋ ಸಾಹೇಬನ ಕಿವಿಗೆ ಬಿತ್ತೆಂದರ ಅಮಾನತ್ತಿನಲ್ಲಿಡುವನೆಂದೂ.. ಆತನೊಟ್ಟಿಗೆ ಬಂದಿದ್ದ ರಾಯನು ಆತನ ಕಿವಿಯೊಳಗೆ ಪಿಸುಗುಟ್ಟಿದನು.
ಮನ್ರೋ ಸಾಹೇಬನ ಕೆಂಗಣ್ಣು ತಗಲಿ ಸೆರೆ ಅನುಭವಿಸುತ್ತಿರುವ ಹೆಸ್ಟಿಂಗ್ಸೂ, ನಿಕೋಲಾಸೂ, ಜಾನೂ, ಡೆವಿಡ್ಡೂ ಇವರೆಲ್ಲ ತನ್ನ ಕಣ್ಣ ಮುಂದೆ ಸುಳಿದು ಹೋದದ್ದು ವಂದು ಕಡೆಯಾದರೆ.. ಯಿನ್ನೊಂದು ಕಡೆ ಮಣ್ಣಿಗೇಂತ ಬಂದಿದ್ದ ಲಕುಸಾಂತರ ಮಂದಿ ಹೆನ್ರಿಸಾಹೇಬಗೆ ಧಿಕ್ಕಾರ.. ಧಿಕ್ಕಾರ.. ನಾವು ನಮ್ಮ ಪ್ರಾಣವನ್ನಾರ ಕೊಟ್ಟೇವು ಆದ್ರೆಸವವನ್ನು ಮಾತ್ರಬಿಟ್ಟುಕೊಡೋದಿಲ್ಲ ಯಂದು ಕೂಗಿದರು ಸಿವನೇ.. ಅದಾದ ಮ್ಯಾಲ....
ಮುತ್ತಯ್ದೆ ಸಾವುಂಡಿದ್ದ ಚಿರಂಜೀವಿ ಕುಂಕುಮ ಸವುಭಾಗ್ಯವತಿ ಚಿನ್ನಾಸಾನಿಯ ಸಾಲಂಕೃತ ಕಳೇಬರದ ಮೆರವಣಿಗೆಯನು ವರಣನ ಮಾಡಲಕ ಸಾವುರ ನಾಲಗೆಗಳ ವಡೆಯನಾದ ಆದಿಸೇಸನೇ ಆಗಬೇಕು.. ಸಿವಸಂಕರ ಮಾದೇವಾ.. ಡೊಳ್ಳು, ಹಲಗೆ, ತಮ್ಮಟೆ, ಸಮಾಳ, ನಂದಿಕೋಲುಗಳೇನು? ರುಮ್ಮಿಗಳೇನು? ಬಾಜಾ ಬಜಂತ್ರಿಗಳೇನು? ಭಜನೆ ತಂಡಗಳೇನು? ಹಾಡ ಹೊಳೆಯಾಗಿದ್ದ ಅಳುವೇನು? ಕಣ್ಣೀರಿನಿಂದಾಗಿದ್ದ ವಜ್ಜಲೊಜ್ಜಲು ನೆಲವೇನು? ದುಮುದುಮು ಅಂತ ಬಡಿದಕೊಳ್ಳುತಲಿದ್ದ ಯದೆಗಳೇನು? ಸೂರ್ಯಾಡುತಲಿದ್ದ ಹೂವುಗಳೇನು? ಚಟಪಟನೆ ಸಿಡಿಯುತಲಿದ್ದ ಪಟಾಕಿಗಳೇನು? ಕಳೇಬರಯಿದ್ದ ಯಿಮಾನದ ನೊಗಕ್ಕೆ ಕೈ ಹಚ್ಚಲು ನಾ ಮುಂದು, ತಾ ಮುಂದು ಅಂತ ಪಯಿಪೋಟಿಗಿಳಿದಿದ್ದ ಹೆಗಲುಗಳೇನು? ಅಲ್ಲಿಲ್ಲಿ ನಡೆಯುತಲಿದ್ದ ಆತುಮಾರ್ಪಣೆಗಳೇನು? ವಂದೇ ಮಾತಿನ ಗುಂಟ ಹೇಳಲಕೆಂದರೆ ಮಣ್ಣುಕೊಡಲಕಂತ ಬಯಲುದೇರಿದ್ದ ಮಂದಿ ಕಳೇಬರದೊದಿಗೆ ತಾವೆಲ್ಲ ಸಾಮೂಹಿಕವಾಗಿ ಮಣ್ಣಾಗಲ ಕೆಂದೇ ಹೊಂಟಿದ್ದರು ಸಿವನೇ..