ವಿಷಯಕ್ಕೆ ಹೋಗು

ಪುಟ:Aramane.pdf/೬೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮೨

ಅರಮನೆ

ವುಯ್ಯಾಲಪಾಡು, ತಂಗಟೂರುಗಳ ಮೂಲವಾಸಸ್ಥರಾದ ದಾಸರಿ ಜನಾಂಗದವರು ಬಾಡಿಗೆ ಕೊಲೆಗಡುಗರಾಗಿ ಪರಿವರ್ತಗೊಂಡುದದರ ಬಗ್ಗೆ ಲಾವಣಿ ಪದ ಕಟ್ಟಿ ಹಾಡೋರೆಲ್ಲದಾರ? ಮುದಿ ರೆಡ್ಡಿ ಪಲ್ಲೆ, ನಲ್ಲಮಲಾ, ಪೊರಮಿಲಾ, ಮಯ್ದುಕೂರು, ಚರುಕುಲಪಾಡು ಕಡೆಯ ಹೊಲೆಮಾದಿಗರು ಕಾಪು, ರೆಡ್ಡಿ, ಕಮ್ಮ, ಕೋಮಟಿಗ, ಯಿವೇ ಮೊದಲಾದ ಹೆಂಗಸರ ಮ್ಯಾಲ ಅತ್ಯಾಚಾರ ಮಾಡುತ ಸತ ಸತಮಾನಗಳ ಸೇಡು ತೀರಿಸಿಕೊಳ್ಳುತಲಿದ್ದುದರ ಬಗ್ಗೆ ಗೀಗೀ ಪದ ಕಟ್ಟುವವರು ಯಲ್ಲದಾರ? ಕುಂಟಿ, ಮೇಳೆ, ನೊಗ, ಬಂಡಿ ಮಾಡುತಲಿದ್ದಂಥ ಬಡಿಗೇರು ತಲೆಗಳನ್ನು ಹೊಡೆಯೋ ಬಡಗಿಗಳನ್ನು ಮಾಡುತಲಿದ್ದುದರ ಬಗ್ಗೆ ಕಥೆ ಕಟ್ಟಿ ಹೇಳುವವರು ಯಲ್ಲದಾರ? ರಯ್ತಾಪಿ ಜನರು ವುಪಯೋಗಿಸುತ್ತಿದ್ದಂಥ ಚಲಕೆ, ಗುದ್ದಲಿ, ಪಿಕಾಸಿ, ಮಾಡುತಲಿದ್ದಂಥ ಕುಲುಮೆಗಾರರು.. ಗಂಡರಗೊಡಲಿ ಮಚ್ಚು, ಚೂರಿ ಬಾಕುಗಳನ್ನು ಮಾಡುತ್ತ ಕೊಲೆಗಡುಕರಿಗೆ ಸರಬರಾಜು ಮಾಡುತಲಿದ್ದುದರ ಬಗ್ಗೆ ಭಾಮಾಕಲಾಪ ಮಾಡೋರು ಯಲ್ಲದಾರ.. ಅಗೋ ಅಲ್ಲಿ ದರೋಡೆ ಕೊಲೆ ಸುಲಿಗೆ.. ಯಿಗೋ ಯಿಲ್ಲಿ ಅತ್ಯಾಚಾರ ಅನಾಚಾರ.. ಅಗೋ ಅಲ್ಲಿ ಸೇಡಿಗೆ ಸೇಡು, ಯಿಗೋ ಯಿಲ್ಲಿ ಮುಯ್ಯಿಗೆ ಮುಯ್ಯಿ.. ಅಯ್ಯೋ ಮಂಥೋಳ ಸಾಹೇಬಾss ನೀನು ಹಾವು ಹೊಡೆದು ಹದ್ದಿಗೆ ಹಾಕಿದೆಯಲ್ಲಾ.. ನರಮಾನ್ನವರನ್ನು ನರಮಾಮುಸ ಭಕ್ಷಕರನ್ನಾಗಿ ಮಾಡಿದಿಯಲ್ಲಾ.. ನಿನ್ನೀ ಕ್ರುತ್ಯ ನ್ಯಾಯವೇನಯ್ಯಾ, ಕುರುಡರಿಗೆ ಚಾಳೇಸು ಸರಬರಾಜು ಮಾಡಿದಿಯಲ್ಲಾ. ಹೆಳವರಿಗೆ ಬೂಡುಸುಗಳನ್ನು ಬಟವಾಡೆ ಮಾಡಿದಿಯಲ್ಲಾ.. ಅಕಾಲಮರಣದ ಪಾಠ ಹೇಳಿಕೊಟ್ಟೆಯಲ್ಲಾ.. ನಿನ್ನೀ ಕ್ರುತ್ಯ ನ್ಯಾಯವೇನಯ್ಯಾ.. ಕಾಯೋ ಬೇಲಿಗಳಿಗೆ ಹೊಲಗಳನ್ನು ಮೇಯುವುದನ್ನು ಕಲಸಿದ್ದು ನೀನೇ.. ಯಡಗಯ್ಯಿಗೆ ಲೆಕ್ಕಣಿಕೆ, ಬಲಗಯ್ಯಿಗೆ ನಾಡ ಬಾಂಬನ್ನಿಟ್ಟವನು ನೀನೇ.. ಆಳಕ್ಕಿಳಿದ ಕಣ್ಣುಗಳನ್ನು ಗುಗ್ಗುಳ ಮಾಡಿದವನು ನೀನೇ.. ರಾಯಲ ಸೀಮೆಯನ್ನು ಗಾಯಗಳ ಸೀಮೆಯನ್ನಾಗಿ ಮಾಡಿದ ನೀನು ಹಸಿದೊಡೆ ವುಣ್ಣಿಲಿಕ್ಕಾದೀತಾ.. ತ್ರುಷೆಯಾದೊಡೆ ನೀರು ಕುಡಿಯಲಿಕ್ಕಾದೀತಾ..ನಿದ್ದೆ ಬಂದೊಡೆ ರೆಪ್ಪೆಗೆ ರೆಪ್ಪೆ ಅಂಟಿಸಿ ನಿದ್ದೆ ಮಾಡಲಿಕ್ಕಾದೀತಾ.. ನಿನಗೇನು ಹೆಂಡರಾ.. ಮಕ್ಕಳಾ.. ವÆರಾ.. ವುದ್ಯಾನ.. ಮಂಥೋಳ ಸಾಹೇಬನೇ ನಿನಗೆ ರವುರವ ನರಕ ಅಗೋ ಯಿಲ್ಲಿ, ಯಿಗೋ ಯಿಲ್ಲಿ.. ಯಂದು ಮುಂತಾಗಿ ಅಂತರು ಬೆಂತರುಗಳು ಯತ್ತುತಲಿದ್ದ ಪ್ರಶ್ನೆಗಳಿಗೆ