ಅಗೋ ನೋಡಲ್ಲಿ’’ ಯಂದು ಬೊಟ್ಟು ಮಾಡಿ ತೋರಿಸಿತೆಂದರೆ ನಂಬುವುದಾ? ನಂಬದಂಗ ಯಿರುವುದಾ?
ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ....
ಯಿವಯ್ಯ ನೋಡಲಾಗಿ ಆ ತಾಯಿಯು
ನೆಲಮುಗುಲಿಗೇಕಾಗಿ, ಭೂಮಿಗಾತುರದವಳಾಗಿ, ಗೋಚರ ಮಾಡಿದಳಂತೆ.. ವಂದೊಂದು ಹೆಜ್ಜೆಗೆ ವಂದೊಂದು ಲೋಕವನ್ನಳೆದಳಂತೆ.. ಗುಡುಗು ಸಿಡಿಲುಗಳನ್ನು ತನ್ನ ನಾಲಗೆ ಮ್ಯಾಲ ವಟ್ಟಿ ಕೊಂಡಿದ್ದಳಂತೆ.. ಮಿಂಚು ಕೋಲ್ಮಿಂಚುಗಳನ್ನು ತನ್ನ ಕಣ್ಣೊಳಗೆ ಮಡುಗಿದ್ದಳಂತೆ.. ಅಷ್ಟ ದಿಗ್ಗಜಗಳ ರಸಾಸ್ವಾದನೆಯನ್ನು ತಾನು ಮಾಡುತ್ತಿದ್ದಳಂತೆ.. ಸಿವನೇ....
ಅಂಥಾ ತಾಯಿಯನ್ನು ತನ್ನ ಕಣಸೊಳಗ ಅದೇ ಮೊದಲ ಸಲ ನೋಡಿದವನಾದ ಯಿವಯ್ಯನು ಬೆಕ್ಕಸ ಬೆರಗಾದನಂತೆ, ಮೂಕಯಿಸುಮಿತನಾದನಂತೆ.. ಯದೆ ಝಲ್ಲಂದಂಗಾತಂತೆ.. ಕಣ್ಣು ಕುಕ್ಕಿ ದಂಗಾತಂತೆ.. ವುಗುಳು ಗಂಟಲ ಹೊಸ್ತಿಲ ಬಳಿ ಮಡುಗಟ್ಟಿ ನಿಂತಂಗಾತಂತೆ.. ಚೂರುಪಾರು ಸಗುತಿಯನ್ನು ನಾಲಗೆಗೆ ತಂದುಕೊಂಡು
‘‘ಹ್ಹಾಂ.. ಹ್ಹಾಂ... ತಾಯಿ.. ತಾಯಿ ಅಂದರ ನೀನೆ ಕಣವ್ವಾ.. ನಿನ್ನ ದರುಸನದಿಂದ ಜಲುಮ ಸಾರ್ತಕ ಆಯಿತವ್ವಾ.. ಹೊಕ್ಕೊಳ್ಲಿಕ್ಕೆ ನಿಂಗೆ ನನ ಸರೀರವೇ ಬೇಕಾಗಿತ್ತೇನವ್ವಾ.. ನನ್ನ ಸರೀರದೊಳಗ ಯೇನಂಥ ಸಿರಿ ಸಂಪತ್ತಯ್ತಂತ ಬಂದೀಯವ್ವಾ.. ಯಿದು ಮೊದ್ಲೇ ವಂದೊಂದು ಹೆಜ್ಜೆಗೆ ವಂದೊಂದು ಸಬುಧ ಮಾಡುತಯ್ತೆ.. ಕುಂತರೆ ಯದ್ದೇಳಕಾಗೊಲ್ಲ.. ಯದ್ದರೆ ಕುಂಡರಲಕಾಗುತಿಲ್ಲ. ಜೀವಾತುಮ ಯಂಬುದು ಯಿಲ ಯಿಲನೆ ವದ್ದಾಡುತಯ್ತೆ.. ಯಿದರೊಳಗ ಮಾವುಸಗಿರ್ಡ ಮಣ, ರಗುತ ಪಾಮೂರೆಯಿದ್ದರ ಮಸ್ತಾದೀತು, ಯಿಂದ್ರಿಯಗಳು ಸವುಕೊಂಡು ಹೋಗ್ಯಾವ, ಯಿಂಥ ಸರೀರದೊಳಗ ಯೇನು ಅಯಿಭೋಗ ಅಯಿತಂತ ಬಂದೀಯವ್ವಾ.. ಹೆಂಗ ವಸ್ತಿ ಯಿರುತೀಯವ್ವಾ.. ಯೀ ನನ್ನ ಮಟ ಮಟ ಮಯ್ಲಿಗಿ ಸರೀರದೊಳಗ ಯಾವ ಸುಖನ ಪಡುತೀಯವ್ವಾ..’’ ಯಂದು ಮುಂತಾಗಿ ಯೀವಯ್ಯ ಮನಾರ ಕೇಳಿಕೊಂಡಿದ್ದಕ್ಕೆ ಸರೀರವು ಪಕಪಕ ನಗಾಡುತ ಹುಚ್ಚಪ್ಪಾ.. ನಾಡ ಹುಚ್ಚಪ್ಪಾ ಅಂದಂಗಾತಂತೆ, ಮತ್ತ ಯೀತನು....
ನೀ ಹೋಗುತೀನಂದರ ನೀನಿದ್ದಲ್ಲಿಗೆ ಬಂದು ಮಂಡೆ ಕೊಡುತೀನವ್ವಾ ಅಂದನಂತೆ.. ಕಯ್ನ ಮುಗಿತೀನಂದನಂತೆ.. ಕಾಲಿಗೆ ಕಡಕೊಂಡು