ವಿಷಯಕ್ಕೆ ಹೋಗು

ಪುಟ:Athmakathanagalalli Shala Shikshaka.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಶೋಧನೆಯ ಹೆಚ್ಚುಗಾರಿಕೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಸ್ಕೃತಿಯ ವಾಹಕವಾಗಿ ಗುರುತಿಸಿಕೊಂಡಿರುವ 'ಶಾಲೆ' ಹಾಗೂ ಶಾಲಾ ಶಿಕ್ಷಣವನ್ನು ಆತ್ಮಕಥನಗಳ ನಿರೂಪಣೆಯ ಮೂಲಕ ನಿರ್ವಚಿಸುವ ಸಂಶೋಧಿಸುವ ಪ್ರಯತ್ನ ಇಲ್ಲಿದೆ. ಸಾಹಿತ್ಯದ ಅಧ್ಯಯನದ ಮೂಲಕ ಸಮಾಜ ಮತ್ತು ಸಂಸ್ಕೃತಿಗಳ ಅಧ್ಯಯನ ಮಾಡಲು ಆತ್ಮಕಥನಗಳನ್ನು ಪ್ರಧಾನ ಆಕರಗಳನ್ನಾಗಿ ಬಳಸಿಕೊಂಡು ಕಾಲಕಾಲಕ್ಕೆ ಸ್ಥಿತ್ಯಂತರ- ಪರಿವರ್ತನೆಗೊಳ್ಳುತ್ತಿರುವ ಶೈಕ್ಷಣಿಕ ಸಿದ್ದಾಂತಗಳನ್ನು ವಿಶ್ಲೇಷಿಸುವ ಉದ್ದೇಶದೊಂದಿಗೆ ಸಂಶೋಧಕರು ಆಯ್ದ 20 ಆತ್ಮಕಥೆಗಳನ್ನು ವ್ಯಕ್ತಿ ಅಧ್ಯಯನ, ವಿಶ್ಲೇಷಣಾತ್ಮಕ ಮತ್ತು ತೌಲನಿಕ ಹೀಗೆ ಬಹುಶಿಸ್ತೀಯ ನೆಲೆಯಲ್ಲಿ ವಿಮರ್ಶಿಸಿ ಈ ಅಧ್ಯಯನಕ್ಕೆ ಖಚಿತವಾದ ಹಾಗೂ ಸಮಗ್ರವಾದ ಒಂದು ಸಂಶೋಧನಾ ಶಿಸ್ತನ್ನು ನೀಡಿದ್ದಾರೆ. ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ, ಅರ್ಥ ಮತ್ತು ಸೈದ್ಧಾಂತಿಕ ಹಿನ್ನಲೆ, ಅಧ್ಯಯನದ ಮಿತಿಗಳು ಹಾಗೂ ಅಧ್ಯಯನದ ಮಹತ್ವವನ್ನು ಸಮರ್ಥವಾಗಿ ವಿವರಿಸಿದ್ದಾರೆ. ವಿಶ್ಲೇಷಣಾತ್ಮಕ, ಪರಿಕಲ್ಪನಾತ್ಮಕ, ವ್ಯಕ್ತಿ ಅಧ್ಯಯನ ಮತ್ತು ತೌಲನಿಕ ಹೀಗೆ ಬಹುಶಿಸ್ತೀಯ ಮಾದರಿಯಲ್ಲಿ ಸಂಶೋಧಕರು ತಮ್ಮ ಅಧ್ಯಯನದ ವಿನ್ಯಾಸವನ್ನು ರೂಪಿಸಿಕೊಂಡು ಆತ್ಮಕಥೆಗಳ ನಿರ್ವಚನೆಯ ಮೂಲಕ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಒಂದು ಮೌಲಿಕವಾದ ಸಂಶೋಧನೆಯ ಮಹಾಪ್ರಬಂಧವನ್ನು ಕೈಗೊಳ್ಳಲು ಬೇಕಾದ ಭೂಮಿಕೆಯನ್ನು ಪ್ರಸ್ತುತ ಪಡಿಸಿದ್ದಾರೆ. ವಸಾಹತುಶಾಹಿ ಕಾಲಘಟ್ಟದ ಶಾಲಾ ಶಿಕ್ಷಣದ ಸ್ವರೂಪವನ್ನು ವಿದ್ಯಾರ್ಥಿ, ಶಿಕ್ಷಕ, ಪಠ್ಯ ಹಾಗೂ ಪರಿಸರದ ನೆಲೆಯಲ್ಲಿ ವಿವೇಚಿಸಿದ್ದಾರೆ. ಈ ಅಧ್ಯಯನದಲ್ಲಿ ಪ್ರಮುಖ ಹತ್ತು ಆತ್ಮಕಥೆಗಳನ್ನು ಆಧಾರವಾಗಿಟ್ಟುಕೊಂಡು ವಸಾಹತುಶಾಹಿ ಕಾಲಘಟ್ಟದ ಶಾಲಾಶಿಕ್ಷಣದ ಇತಿಹಾಸದಲ್ಲಿ ದಾಖಲಾಗಿರುವ ವಿಷಯಗಳಿಗಿಂತ ಭಿನ್ನವಾಗಿ ಹಲವಾರು ಪ್ರಮುಖ ವಿಚಾರಗಳನ್ನು ಶೋಧಿಸಿದ್ದಾರೆ. ಎಲ್ಲರಿಗೂ ಮುಕ್ತವಾಗಿ ದೊರಕದ ಶಾಲಾ ಶಿಕ್ಷಣ ಕುರಿತು ಸಮಾಜದ ಕೆಲವು ವರ್ಗಗಳಲ್ಲಿದ್ದ ನಿರ್ಲಕ್ಷ್ಯದ ಭಾವ, ಪ್ರತಿಭಾವಂತರಿಗೆ ದೊರಕದ ಪ್ರೋತ್ಸಾಹ ಇವೇ ಮೊದಲಾದ ಋಣಾತ್ಮಕ ವಿಚಾರಗಳೊಂದಿಗೆ ವಸಾಹತುಶಾಹಿ ಕಾಲಘಟ್ಟದಲ್ಲಿ ಶಾಲಾ ಶಿಕ್ಷಣದಲ್ಲಿದ್ದ ಇಂದಿನ ಶಿಕ್ಷಣ ಪದ್ಧತಿಗೆ ಮಾದರಿಯಾಗಬಹುದಾದ ಸಮಾಜದ ಹಲವಾರು ಧನಾತ್ಮಕ ಅಂಶಗಳನ್ನು ಶೋಧಿಸುವ ಮೂಲಕ ಅಧ್ಯಯನಕ್ಕೆ ಬೇಕಾದ ಪ್ರಧಾನ ಭೂಮಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಶಾಲಾಶಿಕ್ಷಣದ ಸ್ವರೂಪವನ್ನು ಮೂರನೇ ಅಧ್ಯಾಯದಂತೆ ವಿದ್ಯಾರ್ಥಿ, ಶಿಕ್ಷಕ, ಪಠ್ಯ ಹಾಗೂ ಪರಿಸರ ಎಂಬ ನಾಲ್ಕು ನೆಲೆಗಳಲ್ಲಿ ವಿಶ್ಲೇಷಿಸಿ ಬದಲಾವಣೆಗಳನ್ನು ಆತ್ಮಕಥನಕಾರರು ಹೇಗೆ ದಾಖಲಿಸಿದ್ದಾರೆ ಎಂಬ ಕುರಿತು ವಿಸ್ತತವಾದ ಚರ್ಚೆಯನ್ನು ಮಾಡಿದ್ದಾರೆ. ಹತ್ತು ಆತ್ಮಕಥೆಗಳನ್ನು ಆಧಾರವಾಗಿಟ್ಟುಕೊಂಡು ವಿವರವಾಗಿ ವಿಶ್ಲೇಷಿಸಿದ್ದಾರೆ. ವಿವಿಧ ಜಾತಿ, ವರ್ಗ, ಲಿಂಗ, ಪ್ರದೇಶಗಳಲ್ಲಿ ನಡೆದ ಪರಿವರ್ತನೆಗಳನ್ನು ಸ್ಪಷ್ಟವಾಗಿ ಗುರುತಿಸಿ ದಾಖಲಿಸಿರುವುದು ಈ ಅಧ್ಯಯನದ ಮಹತ್ವದ ಅಂಶವಾಗಿದೆ. ಆತ್ಮಕಥನಗಳಲ್ಲಿ ಪಾಶ್ಚಾತ್ಯರ ಹೊಸಬಗೆಯ ಶಾಲಾ ಶಿಕ್ಷಣಕ್ಕೆ ತೀವ್ರವಾದ ವಿರೋಧದ ಒಂದೂ ಉಲ್ಲೇಖವೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಪ್ರಾಮಾಣಿಕವಾಗಿ, vi