ಶಿಸ್ತುಬದ್ಧವಾಗಿ ಶಾಲಾಶಿಕ್ಷಣದ ನೆಲೆಗಳನ್ನು ಶೋಧಿಸಿರುವುದು ಈ ಸಂಶೋಧನೆಯ ಹೆಚ್ಚುಗಾರಿಕೆಯಾಗಿದೆ. ಶೈಕ್ಷಣಿಕ ವಿದ್ಯಮಾನಗಳು-ಆತ್ಮಕಥೆಗಳಲ್ಲಿ ಕಂಡುಬರುವ ಅಭಿವ್ಯಕ್ತಿಯ ನೆಲೆಗಳನ್ನು ಜಾತೀಯತೆ, ಲಿಂಗಸಮಾನತೆ, ಬಹುಮಾನ ಮತ್ತು ಶಿಕ್ಷೆ, ಪರೀಕ್ಷೆ ಮತ್ತು ಫಲಿತಾಂಶ, ಭಾಷಾ ಮಾಧ್ಯಮ ಮತ್ತು ಭಾಷಾ ಕಲಿಕೆ ಎಂಬ ಐದು ಪ್ರಮುಖ ನೆಲೆಗಳಲ್ಲಿ ವಿಶ್ಲೇಷಿಸಿದ್ದಾರೆ. ಈ ಪ್ರಮುಖ ಐದು ನೆಲೆಗಳನ್ನು ಪ್ರಚಲಿತ ವರ್ತಮಾನಕ್ಕೆ ಮುಖಾಮುಖಿಯಾಗಿಸಿ ಆತ್ಮಕಥೆಗಳ ನಿರೂಪಣೆಗಳ ಮೂಲಕ ವಿಶ್ಲೇಷಿಸಿರುವುದು ಈ ಮಹಾಪ್ರಬಂಧದ ಹೆಗ್ಗಳಿಕೆಯಾಗಿದೆ. ಮಹಾಪ್ರಬಂಧ ಶಿಸ್ತುಬದ್ಧವಾಗಿ, ಸೈದ್ಧಾಂತಿಕವಾಗಿ ಕನ್ನಡ ಆತ್ಮಕಥನಗಳಲ್ಲಿ ಶಾಲಾಶಿಕ್ಷಣದ ನೆಲೆಗಳನ್ನು ಖಚಿತಪಡಿಸಿಕೊಳ್ಳಲು ಈ ಅಧ್ಯಾಯದಲ್ಲಿ ಸಂಶೋಧಕರು ಸಮಗ್ರವಾಗಿ ಒಳನೋಟಗಳನ್ನು ನೀಡಿದ್ದಾರೆ. ಈ ಸಂಶೋಧನೆಯ ಮೂಲಕ 76 ವರ್ಷಗಳ ಶಾಲಾಶಿಕ್ಷಣದ ಸ್ವರೂಪದ ನೇರ ಉಲ್ಲೇಖಗಳು ಲಭಿಸಿವೆ. ಸಮಾಜದಲ್ಲಿ ವೈಜ್ಞಾನಿಕ ಪ್ರಜ್ಞೆಯನ್ನು ವಿಸ್ತರಿಸಿ, ಸಾಂಸ್ಕೃತಿಕ ವೈವಿಧ್ಯವನ್ನು ಉಳಿಸಿ ಬೆಳೆಸುವಲ್ಲಿಯೂ ಶಾಲಾಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸಿದೆ ಎಂಬುದನ್ನು ಸಂಶೋಧಕರು ಸಶಕ್ತವಾಗಿ ತಮ್ಮ ಮಹಾಪ್ರಬಂಧದಲ್ಲಿ ವಿಶ್ಲೇಷಿಸಿದ್ದಾರೆ. ಪಠ್ಯಪುಸ್ತಕದಲ್ಲಿನ ಅಂಶಗಳು ವಿವಾದದ ರೂಪವನ್ನು ಪಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇರುವುದನ್ನು ಆತ್ಮಕಥನಗಳ ಅಧ್ಯಯನವು ಸಾಬೀತುಪಡಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಶೋಷಿತರಿಗೆ, ಮಹಿಳೆಯರಿಗೆ ಶಿಕ್ಷಣ ವ್ಯವಸ್ಥೆಯು ನಿಧಾನವಾಗಿ ತೆರೆದುಕೊಳ್ಳುತ್ತಾ ಬಂದ ಪರಿ, ಶಿಸ್ತು ಮತ್ತು ಬಹುಮಾನದ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಪರಿಣಾಮಗಳು, ಶಿಕ್ಷಣದಲ್ಲಿ ಮೌಲ್ಯಮಾಪನದ ಮಹತ್ವದ ಬಗೆಗಿನ ನೀತಿ ನಿರೂಪಣೆಗಳ ತಾತ್ವಿಕ ಬದಲಾವಣೆಗಳು, ಬಹುತ್ವವನ್ನು ಪ್ರತಿಬಿಂಬಿಸುವ ಜನಸಮುದಾಯದ ಮೌಖಿಕ ಸಾಹಿತ್ಯದ ಅಭಿವ್ಯಕ್ತಿಗಳು, ಭಾಷಾ ಕಲಿಕೆಗೆ ಪೂರಕವಾಗುವ ಪ್ರಕ್ರಿಯೆಗಳು, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡುವ ಕುರಿತು ಸರಕಾರದ ಭಾಷಾ ನೀತಿಯನ್ನು ಪುನರ್‌ರೂಪಿಸುವ ಅಗತ್ಯದ ಒತ್ತಾಸೆ, ಸಂಶೋಧನೆಯ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯ ಪ್ರಗತಿಯ ಸಾಧ್ಯತೆಗಳು- ಇವೆಲ್ಲವನ್ನೂ ಒಳಗೊಂಡು ಈ ಸಂಶೋಧನೆಯು ವ್ಯವಸ್ಥಿತವಾಗಿ ನಡೆದು ಅಚ್ಚುಕಟ್ಟಾಗಿ ಸರಳ ನಿರೂಪಣೆಯ ಕ್ರಮದಿಂದ ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಒಂದು ಮೌಲಿಕ ಪ್ರಬಂಧವಾಗಿ ಮೂಡಿಬಂದಿದೆ. ಇದೊಂದು ಬಹುಶಿಸ್ತೀಯ ನೆಲೆಯ ಅಧ್ಯಯನವಾಗಿದ್ದು ಇಲ್ಲಿಯ ಫಲಿತಗಳು ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಹತ್ವವನ್ನು ಹೊಂದಿವೆ. ತಮ್ಮ ನಿಖರ ಹಾಗೂ ಆಳವಾದ ಸಂಶೋಧನಾ ಆಸಕ್ತಿ ಹಾಗೂ ಚಿಂತನೆಗಳ ಮೂಲಕ ಗಂಭೀರವಾಗಿ ಸಂಶೋಧನೆ ನಡೆಸಿರುವ ಶ್ರೀಯುತ ಡಾ. ಅಶೋಕ ಕಾಮತ್ ಅಭಿನಂದನಾರ್ಹರು, ಈ ಸಂಶೋಧನೆಯು ಮುಂದೆ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲಿರುವ ಯುವ ಸಂಶೋಧಕರಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಡಾ. ನಿಕೇತನ ಸಂಶೋಧನಾ ಮಾರ್ಗದರ್ಶಕರು ಮತ್ತು ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ VII
ಪುಟ:Athmakathanagalalli Shala Shikshaka.pdf/೭
ಗೋಚರ