ಪುಟ:Banashankari.pdf/೧೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಹೊಲಗಳಾಚೆ, ದಟ್ಟನೆಯ ಮರಗಳ ನಡುವೆ,ಕಾಲುಹಾದಿ ಹಿಡಿದು ಅವರಿಬ್ಬರೂ ನಡೆದು ಬರುತ್ತಿರಬೇಕು–ಅ೦ಚೆಯವನು ಮತು ಅವರು. ಸ್ವಲ್ಪ ಹೊತ್ತಿನಲ್ಲಿ ಪಟಾಕಿ ಸುಟು ಮುಗಿಯಿತು. ಅತ್ತೆ ಅಡುಗೆ ಮನೆಗೆಂದು ಒಳ ಹೋದರು. ಮಾವ ಎಳೆಯರನ್ನು ಉದ್ದೇಶಿಸಿ, " ಇನ್ನು ಸಾಕು. ಬನ್ನಿರೋ ಒಳಕ್ಕೆ,"ಎಂದರು. ಅಮ್ಮಿ ಅಂಗಳದ ಬಲಮೂಲೆಯಲ್ಲಿ ಬಿದಿರು ತಟಿಕೆಗಳು ಮರೆಮಾಡಿದ್ದ ಬಚ್ಚಲು ಮನೆಗೆ ಹೋದಳು. ಮುಂಜಾವದ ಹಬ್ಬದ ಸ್ನಾನಕ್ಕೆಂದು ನೀರು ಹೊತು ನಿಂತಿತ್ತು. ದೊಡ್ಡ ಗುಡಾಣ.. ಆತ್ತೆ ಅದರ ಸುತ್ತಲೂ ಚಿತಾರ ಬರೆದಿದ್ದರು. ಆಮ್ಮಿ ಆದರ ಕೊರಳಿಗೆ ಹೂವಿನ ಹಾರ ಕಟ್ಟಿದ್ದಳು. ....ಬೆಳಗು ಮುಂಜಾನೆ ಅತ್ತೆ ಎಲ್ಲರನ್ನೂ ಬೇಗ ಎಬ್ಬಿಸುವರು. ಆ ಬಳಿಕ ದೇವರ ದೀಪದ ಮುಂದೆ ಗಂಡನನ್ನು ಕುಳ್ಳಿರಿಸಿ, ಹಸಿ ಗರಿಕೆ ಹುಲ್ಲಿನ ಚಿಗುರಿನಿಂದ ಅಮ್ಮಿ ಮೂರು ಬಾರಿ ಆತನ ಮೈಗೆ ಎಣ್ಣೆ ಇಳಿಸಬೇಕು. ಆಮೇಲೆ ಆತ ಬೇಡವೆನದೇ ಹೋದರೆ ಆ ಮೈ ಕೈಗಳಿಗೆ, ತಾನೇ ಎಣ್ಣೆ ತೀಡಬೇಕು.

 ಆ ಯೋಚನೆಯಿಂದಲೇ, ಗುಡಾಣವನು ಮುಟ್ಟಿನಿಂತಿದ್ದ ಅಮ್ಮಿಯ ಮುಖ ಕೆಂಪ
ಗಾಯಿತು. ಮದುವೆಯಾದೊಡನೆಯೇ ಮಾವನ ಮನೆಗೆ ಬಂದಿದ್ದಳು ಅಮ್ಮಿ-ತಾಯಿ ತಂದೆ ಯರಿಲ್ಲದ ತಬ್ಬಲಿ ಹುಡುಗಿ, ತವರಿನಲ್ಲಿ ಹಿಂದೆ ಉಳಿದವನೊಬ್ಬನೇ- ವಯಸ್ಸಿನಲ್ಲಿ 

ನಾಲ್ಕು ವರ್ಷ ಹಿರಿಯವನಾದ ಆಕೆಯ ಅಣ್ಣ, ಗಂಡನ ಮನೆಗೆ ಬಂದ ಪಟಾಣಿ ಹುಡುಗಿ ಅಮ್ಮಿ ಗೃಹಲಕ್ಷ್ಮಿಯಾದಳು : ಮಾವ ಅತ್ತೆಯರ ಪ್ರೀತಿಪಾತ್ರಳಾದ ಮುದ್ದಿನ ಸೊಸೆಯಾದಳು. ಇದು ಈ ಮನೆಯಲ್ಲಿ ಆಕೆಯ ಎರಡನೆಯ ದೀಪಾವಳಿ, ಕಳೆದ ಬಾರಿ ಗಂಡ ಊರಲ್ಲೇ ಇದ್ದ. ಹದಿನೇಳರ ಆ ಅಣ್ಣ, ತಾನು ಮದುವೆಯಾದ ಸದ್ಗ್ರ ಹಸ್ಥನೆಂಬುದನ್ನೂ ಮರೆತು, ತಮ್ಮಂದಿರ ಜತೆ ಸೇರಿ ಪಟಾಕಿ ಸುಟ್ಟಿದ್ದ. ಅದು, ಅವರ ತಂದೆ ಹಿಂದೆಯೇ ನಗರದಿಂದ ತಂದು ತೆಗೆದಿರಿಸಿದ್ದ ಪಟಾಕಿ..ಆ ಸಾರೆಯೂ ಗಂಡನಿಗೆ ಎಣ್ಣೆ ತೀಡೆಂದು ಅತ್ತೆ ತನಗೆ ಹೇಳಿದ್ದರು. ಆದರೆ ತನಗೆ ನಾಚಿಕೆಯಾಗಿತು, ಗಂಡನಿಗೂ ನಾಚಿಕೆಯಾಗಿತ್ತು. ಗರಿಕೆ ಹುಲ್ಲಿನ ಶಾಸ್ತ್ರ ಮುಗಿದೊಡನೆ ಆತ, ತಲೆ ತಗ್ಗಿಸಿ, ಕೇಳಿಯೂ ಕೇಳಿಸದ ಧ್ವನಿಯಲ್ಲಿ, "ನಾನೇ ಹಚ್ಕೋತೀನಿ," ಎಂದಿದ್ದ. ಇಲ್ಲ,ಈ ಸಾರೆ ಹಾಗಾಗಬಾರದು. ಅತ್ತೆಯ ಸ್ವರ ಒಳಗಿಂದ ಬಂತು: "ಅಮ್ಮೀ, ಎಲ್ಹೋದಿಯೇ ?" "ಬಂದೇ ಅತ್ತೇ....." ಪಡಸಾಲೆಯಲ್ಲಿ ನಾಣಿ ಮತು ರಂಗ, 'ಹಾಗಲ್ಲ ಹೀಗೆ' ಎಂದು ಏರುದನಿಯಲ್ಲಿ ಏನೋ ಚರ್ಚೆ ನಡೆಸಿದ್ದರು. ಅವರ ತಂದೆ ಬಂದು ಚಾಪೆಯ ಮೇಲೆ ಕುಳಿತೊಡನೆ ರಂಗ ಕೇಳಿದ: "ಅಪ್ಪಯ್ಯ, ಕಥೆ ಹೇಳು ಅಪ್ಪಯ್ಯ."