ಪುಟ:Banashankari.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಯಾವ ಕಥೆನೋ ? " "ನರಕಾಸುರ ವಧೆ ಕಥೆ ಅಪ್ಪಯ್ಯ." ಅದರ ಜತೆಯಲ್ಲೆ ನಾಣಿಯ ಸ್ವರ: "ಬಲೀದು,ಬಲಿ ಚಕ್ರವರ್ತಿದು ಅಪ್ಪಯ್ಯ..."

ಅಮ್ಮಿಗೂ ಅಲ್ಲೇ ಕುಳಿತು ಕೇಳುವ ಆಸೆ. ಆದರೆ ಆ ಪುಟ್ಟ ಗೃಹಿಣಿಗೆ ಕಥೆ ಕೇಳಲು ಬಿಡುವಿಲ್ಲ. ಒಳಗೆ ಅಡುಗೆಯ ಕೆಲಸದಲ್ಲಿ ಅತ್ತೆಗೆ ನೆರವಾಗಬೇಕು. ಅವರು ಬರುವ 

ಹೊತ್ತಿಗೆ- "ಚಿಕ್ಕಮಗಳೂರಿನಿಂದ ಗಾಡಿ ಕಟ್ಟಿದ್ದೇ ತಡವಾಯ್ತೇನೋ..." ಎಂದು ತಮ್ಮಷ್ಟಕ್ಕೆ ಅತ್ತೆ ಆಡಿಕೊಂಡರು. ಅಮ್ಮಿ ಚಿಕ್ಕಮಗಳೂರು ನೋಡಿದವಳಲ್ಲ. ಆದರೆ ಅತ್ತೆ ಬಾರಿಬಾರಿಗೂ ಆ ಊರಿನ ವರ್ಣನೆ ಮಾಡಿದ್ದರು. ಅಲ್ಲಿ ದೊಡ್ಡ ಸಾಹುಕಾರರೊಬ್ಬರ ಅಂಗಡಿಯಲ್ಲಿ ಅಮ್ಮಿಯ ಗಂಡ ಲೆಕ್ಕ ಬರೆಯುವ ಗುಮಾಸ್ತೆ, ಒಂದು ವರ್ಷದ ಅವಧಿಯಲ್ಲೆ ಬಲು ನಂಬಿಗಸ್ಥನೆನಿಸಿಕೊಂಡು ತಿ೦ಗಳಿಗೆ ಆತ ಹತ್ತು ರೂಪಾಯಿ ಸಂಬಳ ಪಡೆಯುತ್ತಿದ್ದ, ದೊಡ್ಡವನಾದ ಹಾಗೆ ಅವನಿಗೆ ದೊಡ್ಡ ದೊಡ್ಡ ಸರಕಾರಿ ಹುದ್ದೆಗಳು ಸಿಗುವವೆಂದು ಅತ್ತೆ ಹೇಳುತ್ತಿದ್ದರು, ಮಾವನೂ ಹೇಳುತ್ತಿದ್ದರು. ಚಿಕ್ಕಮಗಳೂರಿನಿಂದ ಹಳ್ಳಿಗೆ ಬರಬೇಕಾದರೆ ಎತ್ತಿನ ಗಾಡಿಯಲ್ಲಿ ಹನ್ನೆರಡು ಮೈಲು ದೂರ ಬರಬೇಕು. ಕಲ್ಲು ಕೆಸರಿನ ಕೊರಕಲು ಹಾದಿ. ಆಮೇಲೆ ಕಾಲ್ನಡಿಗೆ....ಹಾಗೆ ಹಳ್ಳಿ ಸೇರಬೇಕು. ಅಡುಗೆಯ ಸಿದ್ದತೆ ಎಲ್ಲವೂ ಮುಗಿದು ಅತ್ತೆ "ರಾಮಾ" ಎಂದು ಬೆನ್ನು ನಿಡಿದುಕೊಂಡರು. ಹೊರಗೆ ಮಾವ ಕಥೆ ಹೇಳುತ್ತಿದ್ದುದೂ ನಿಂತಿತ್ತು. " ಲಕ್ಷ್ಮೀ, ಲಕ್ಷ್ಮೀ..." ಎಂದು ಅವರು ಕರೆದರು. "ಬಂದೆ." "ಸುಳಿವೇ ಇಲ್ವಲ್ಲೇ ಇವರಿಬ್ಬರದೂ." "ತಡವಾಗಿ ಗಾಡಿಕಟ್ಟಿದರೇನೊ?" ಅತ್ತೆಗೆ ಹೊಳೆಯುತ್ತಿದ್ದ ಕಾರಣ ಅದೊಂದೇ. " ಹಬ್ಬದ ದಿವಸ. ಸ್ವಲ್ಪ ಬೇಗ್ನೆ ಹೋರಡ್ಬೇಕೊಂರ ಗ್ಯಾನ ಇರ್ಬೆಡ್ವೇನು" "..........................." "ಅಥ್ವಾ ಸಂತೆ ಬೀದಿಲಿ ಖರೀದಿ ಮಾಡ್ತಾ ತಡವಾಯ್ತೋ ಏನೋ?" " ಇದ್ದರೂ ಇದ್ದೀತು." ಮಾವನ ಸಂದೇಹವೇ ಅಮ್ಮಿಯ ಸಂದೇಹ. ಖರೀದಿಗೆ ನಿಂತು ತಡವಾದುದೇ ಸರಿ. ತಾನು ಬೇರೆ, ಮೇಲೆ ಕನ್ನಡಿಯಿದ್ದ ಕುಂಕುಮದ ಪುಟ್ಟ ಕರಡಿಗೆಯೊಂದು ಇದ್ದರಾದೀತೆಂದು ಎಂದೋ ಒಮ್ಮೆ ಅತ್ತೆಗೆ ಹೇಳಿರಲಿಲ್ಲವೆ?