ಪುಟ:Banashankari.pdf/೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

 ಸಹಾನುಭೂತಿಯ ಆ ನಿಟ್ಟುಸಿರು ಬೀಸಿ ಅಮ್ಮಿಯ ಅಳಲಿನ ಕೊಡ ಮತ್ತೆ ತುಳುಕಿತು. "ಹೊತ್ತು ಕಂತಿ ಒಂದು ಘಳಿಗೆ ಮೇಲಾಯ್ತು. ಹೂಂ. ಬರ್ತೀನಮ್ಮ." ಎಂದರು ಸರಸ್ವತಮ್ಮ. ಸಹಾನುಭೂತಿ ತೋರಿಸಿದ ಅವರು, "ದೈವದ ಆಟ" ಎನ್ನುತ್ತ ಮುಖ ಬಾಡಿಸಿಕೊಂಡು, ತಮ್ಮ ಮನೆಯ ಹಾದಿ ಹಿಡಿದರು. ಹಾಗೆ ಬಂದು, "ಅಯ್ಯೋ ಪಾಪ" ಎಂದು ಮರುಗಿ ಹೋದವರ ಸಂಖ್ಯೆ ಹೇರಳ.ಅಂಗಳದಾಚೆ ನಿಂತು ಕಣ್ಣೀರು ಮಿಡಿದ ಹೊಲೆಯರಿಂದ ಹಿಡಿದು ಮನೆಯೊಳಕ್ಕೆ ಬಂದು ಸಮಾಧಾನದ ಮಾತನ್ನಾಡಿದ ಬ್ರಾಹ್ಮಣರವರೆಗೆ, ಎಷ್ಟೋ ಜನ ಬಂದು ಹೋದರು. ಕತ್ತಲೆಯ ಆ ದೀಪಾವಳಿ ಕಳೆದು ತಿಂಗಳು ಎರಡಾಗಿದ್ದರೂ ಕಣ್ಣೀರಿನ ಅಣೆಕಟ್ಟು ಆ ಮನೆಯಲ್ಲಿನ್ನೂ ಕೋಡಿ ಕಟ್ಟಿ ಹರಿಯುತ್ತಲಿತ್ತು. ಆ ದಿನ ಅಂಚೆಯವನು ಸಾವಿನ ಸುದ್ದಿ ತಂದಾಗ, ತನ್ನ ಪಾಲಿಗೆ ಅದೆಷ್ಟು ಕ್ರೂರವಾದ ಅಶುಭ ವಾತೆ೯ ಎಂಬುದರ ಪೂಣ೯ ಕಲ್ಪನೆ ಅಮ್ಮಿಗೆ ಇರಲಿಲ್ಲ. ತಾನು ಹುಟ್ಟಿದುದಕ್ಕೆ ಒಂದು ತಿಂಗಳ ಹಿಂದೆ ತಂದೆಯ ಸಾವು, ಹುಟ್ಟಿದ ಒಂದು ವಾರದಲ್ಲೆ ತಾಯಿಯ ಸಾವು, ಆ ಬಳಿಕ ಅಜ್ಜಿಯ ಕೈಯಲ್ಲಿ ಪಾಲನೆ ಪೋಷಣೆ–ಅದೀಗ ಅಮ್ಮಿ ಬೆಳೆದು ಬಂದ ರೀತಿ. ಆ ಎರಡು ಸಾವುಗಳೂ ಅವಳ ಪಾಲಿಗೆ ಯಾವುದೋ ಕತೆಯಲ್ಲಿ ನಡೆದ ಘಟನೆಗಳು ಮಾತ್ರ, ಈಗ ಕೈ ಹಿಡಿದ ಪತಿ ದೇವರ ಸಾವು... ಮರುದಿನ, ದೇಶವೆಲ್ಲಾ ಹಬ್ಬದ ಗದ್ದಲದಲ್ಲಿ ಮುಳುಗಿದಾಗ, ರಾಯನಹಳ್ಳಿಗೆ ರಾಮ ಚಂದ್ರನ ಶವವನ್ನು ಹೊತುತಂದರು. ಮನೆಯಂಗಳದಲ್ಲಿ ಆ ದೇಹಕ್ಕೆ ಸಾನವಾಯಿತು, ಯಾರೋ ಬಂದು ಅಮ್ಮಿಯ ಕೊರಳ ಕರಿಮಣಿ ಬಿಚ್ಚಿದರು : ಕತು ಬರಿದಾಯಿತು. ಹೆರಳು ಬಿಚ್ಚಿದರು : ಕೂದಲು ಆಧಾರವಿಲ್ಲದೆ ಕೆಳಕ್ಕಿಳಿಯಿತು. ಅಮ್ಮಿಯ ಅತ್ತೆ ರೋದಿಸು ತ್ತಿದ್ದರು, ಗಂಟಲು ಬಿರಿಯುವ ಹಾಗೆ. ಅಮ್ಮಿ ಮಾತ್ರ ತುಟಿಪಿಟ್ಟೆನ್ನದೆ ಬೊಂಬೆಯಂತೆ ಕುಳಿತಳು. ಮಗನನ್ನು ಕಳೆದುಕೊಂಡ ಆ ತಂದೆ-ಉಸಿರಾಡದೆ ಮಲಗಿದ್ದ ಅಣ್ಣನನ್ನು, ಎವೆ ಇಕ್ಕದೆ ನೋಡುತ್ತಿದ್ದ ಆ ತಮ್ಮಂದಿರು... ಬ್ರಾಹ್ಮಣರು ಶವವನ್ನು ಹೊತ್ತರು. ರಾಮಚಂದ್ರನ ಕೊನೆಯ ಪ್ರಯಾಣ... ಆಗ ಅಮ್ಮಿ ಕರುಳು ಕಿತು ಬರುವ ಹಾಗೆ ಕೂಗಾಡಿದಳು. ಎರಡೂ ಕೈಗಳನ್ನು ಮುಂದಕ್ಕೆ ಚಾಚಿ "ಅಯ್ಯಯ್ಯೋ" ಎಂದು ಗೋಳಾಡಿದಳು. ಹಳ್ಳಿಯ ಹೊರ ಹೊಲಯದಲ್ಲಿ ಚಿತೆಯುರಿಯಿತು. ಸಂಜೆಯಾಯಿತು. ಮಾವ ಸುಡುಗಾಡಿನಿಂದ ಮನೆಗೆ ಮರಳಿದರು. ದೀಪಾವಳಿಯ ಹಬ್ಬವೇನೋ ಆ ಹಳ್ಳಿಯಲ್ಲಿ ಜರಗಿತು. ಆದರೆ, ಹಿಂದಿನ ದಿನದ ಉತ್ಸಾಹ ಮಾತ್ರ ಯಾರಲ್ಲೂ ಉಳಿದಿರಲಿಲ್ಲ. ಮಗನ ಮರಣದ ಕೊರಗಿನಲ್ಲಿ ತಾಯಿ ಹಾಸಿಗೆ ಹಿಡಿದುದಾಯಿತು. ಅತ್ತೆ ಕಾಹಿಲೆ ಬಿದ್ದುದರಿಂದ ಅಮ್ಮಿ ಚೇತರಿಸಿಕೊಂಡಳು. ರೋಗಿಯ ಆರೈಕೆಗೆಂದು ಹಗಲಿರುಳೂ ಎಚ್ಚರವಿದ್ದು ಆ ಹುಡುಗಿ ಜೀವ ತೇದಳು.