ಪುಟ:Banashankari.pdf/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಬನಶಂಕರಿ ಆಚಾರವಂತರಾಗಿದ್ದರೂ ಆ ಮಾವನಲ್ಲಿ ಎಳೆಯ ಜೀವಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿತ್ತು, ಆಮ್ಮಿ ಬೇಗನೆ ಮೈ ನೆರೆಯಬೇಕು, ಊರೆಲ್ಲ ಡಂಗುರ ಸಾರಿಸಿ, ಶೋಭನ ಪ್ರಸ್ತವಾಗಿ ಮಗನೊಡನೆ ಆಕೆ ಮಲಗಬೇಕು ಎಂಬ ಹಂಬಲವೇನೋ ಅತ್ತೆಗೆ ಇತ್ತು. ಅದಕ್ಕೆ ಪ್ರೇರಣೆ-ಮೊಮ್ಮಗನನ್ನು ಎತ್ತಿ ಆಡಿಸಬೇಕೆಂಬ ಆಸೆ. ಆದರೆ ಅವರ ಜೀವನದಲ್ಲೆ ಏನಾಗಿತ್ತು ? ರಾಮಚಂದ್ರ ಹುಟ್ಟುವುದಕ್ಕೆ ಮುಂಚೆ ನಾಲ್ಕು ಸಾರೆ ಆಕೆ ಗರ್ಭ ಕಳೆದುಕೊಂಡಿದ್ದಳು–ನಾಲ್ಕು ಸಾರೆ, ತನಗೆ ಮಕ್ಕಳಾಗಲಾರವೆಂದು ಆಕೆಯೊಮ್ಮೆ ನಿರಾಸೆಗೊಂಡುದು ಇತ್ತು, ಆದರೆ ಹಾಗಾಗಲಿಲ್ಲ, ಮುದ್ದು ಮುಖದೊಡನೆ ಮೂಡಿಬಂದು ರಾಮಚಂದ್ರ ಮನೆ ಬೆಳಗಿದ. ಆ ಬಳಿಕ, ಏಳೆಂಟು ವರ್ಷಗಳ ಅಂತರದ ಮೇಲೆ, ಮತ್ತೆರಡು ಮಕ್ಕಳಾದುವು ಗಂಡುಮಕ್ಕಳು---

ಈಗ ವಂಶದ ಕುಡಿ ಮುಂದುವರಿಯಬೇಕು... ರಾಮಚಂದ್ರ ದೊಡ್ಡವನಾಗುತ್ತಾನೆ : ಗಣ್ಯವ್ಯಕ್ತಿಯಾಗಿ ಮನೆತನದ ಕೀರ್ತಿ ಹೆಚ್ಚಿಸುತ್ತಾನೆ : ಸುಶೀಲೆಯಾದ ಸುಂದರಿಯಾದ ಹೆಂಡತಿಯ ಜತೆಯಲ್ಲಿ ಗೌರವದ ಬಾಳ್ವೆ ನಡಸುತ್ತಾನೆ--ಇದೀಗ ಆ ದಂಪತಿ ಕಟ್ಟಿದ ಕನಸಿನ ಮನೆ. ಅಮ್ಮಿಯ ಸದ್ಗುಣಗಳಿಗಂತೂ ಅವರು ಮಾರುಹೋಗಿದ್ದರು. ತಿಳಿಯದೆ ಅಮ್ಮಿ ಏನು ತಪ್ಪು ಮಾಡಿದ್ದರೂ ಅವರು ಕ್ಷಮಿಸುತ್ತಿದ್ದರೆಂಬುದರಲ್ಲಿ ಸಂದೇಹವಿರಲಿಲ್ಲ. ಆದರೆ ಅಮ್ಮಿ ತಪ್ಪನ್ನೇ ಮಾಡುತ್ತಿರಲಿಲ್ಲ. ಹೊಂಬಿಸಿಲಿನ ತ೦ಗಾಳಿಯ ದೀರ್ಘವಾದೊಂದು ಹಗಲಿನ ಹಾಗೆ ಆ ಎರಡು ವರ್ಷ ಕಳೆದುಹೋಗಿದ್ದುವು. ಅದಾದ ಬಳಿಕ ಸೂರ್ಯ ಮುಳುಗಿ ಕತ್ತಲೆಯ ಅಧಾಯಕ್ಕೆ ಅನುವು ಮಾಡಿಕೊಟ್ಟಿದ್ದ... –" ಕತ್ತಲಾಯಿತಿನ್ನು, ದೀಪ ಹಚ್ಚಬಾರದೆ ಮಗೂ?ಎಂದು ಮಾವನ ಸ್ವರ ಕೇಳಿಸಿತು.ಹೊಲಗಳ ಮೇಲಿನಿಂದ ಬೀಸುತ್ತಿದ್ದ ಚಳಿಗಾಳಿಯ ಫಲವಾಗಿಯೋ ಏನೋ ಸ್ವರದಲ್ಲಿ ನಡುಕದ ಛಾಯೆ ಇತ್ತು. ನೆನಪುಗಳ ಬಲೆಯಲ್ಲಿ ಸಿಲುಕಿದ್ದ ಅಮ್ಮಿ ಎದ್ದು ನಿಂತಳು. ನೀಲಾಂಜನಕ್ಕೆ ಎಣ್ಣೆ ಸುರುವಿ ಕಡ್ಡಿ ಸುರುವಿ ಕಡ್ಡಿ ಕೊರೆದಳು ಕಂದೀಲನ್ನು ತಂದು ಬಟ್ಟೆಯ ಚಿಂದಿಯಿಂದ ಹೊಗೆಯೊರೆಸಿದಳು...... ಮದುವೆಯಾದ ಹಲವು ತಿಂಗಳ ಮೇಲಿನ ಆ ಒಂದು ಸಂಜೆ. ಅಮ್ಮಿಯೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಎಲ್ಲರೂ ಜೋಯಿಸರ ಮನೆಗೆ ಹೋಗಿದ್ದರು. ಹೊತ್ತು ಕಂತಿತು. ಹೋದವರ ಸುಳಿವಿರಲಿಲ್ಲ. ಆ ಹೊತ್ತಿನಲ್ಲಿ ತನ್ನ ಗಂಡನೊಬ್ಬನೇ ಬಂದರೆ–ಎಂಬ ಭಯ ಅಮ್ಮಿಯನ್ನು ಕಾಡಿತು. ಆ ನಿರೀಕ್ಷೆಯಿಂದ ಕ್ಷಣ ಕಾಲ ಅವಳು ಕಂಪಿಸಿದಳು. ಆದರೆ ಆ ಕಂಪನದಿಂದ ಅವಳಿಗೆ ಹಿತವೆನಿಸಿತು. ಭಯ ತೊಲಗಿ, ಪತಿಯ ಆಗಮನದ ಮಧುರ ಕಲ್ಪನೆ ಅವಳನ್ನು ಸೆರೆ ಹಿಡಿಯಿತು. ಜತೆಯಲ್ಲೆ "ಇಲ್ಲ–ಬರಲಾರರು." ಎಂಬ ನಿರಾಸೆ ತಲೆ ಯೆತ್ತಿತು.ಆಳಬೇಕೆಂದು ತೋರಿತು ಅವಳಿಗೆ. ಆಗ ಆಕೆ ಮೆಲ್ಲನೆದ್ದು ನೀಲಾಂಜನ ಉರಿಸಿದಳು, ಕಂದೀಲನ್ನು ಮೊಗಸಾಲೆಗೆ ತಂದು ಕೆಳಕ್ಕಿರಿಸಿ, ಗಾಜಿನ ಹೊಗೆಯೊರೆಸುತ್ತ ಕುಳಿತಳು. ಹಾಗೆ ಕುಳಿತಾಗ ಆ ಸಪ್ಪಳ ಕೇಳಿಸಿತು. ಬಲು ಹಗುರವಾದ ಮೆಲುನಡಿಗೆ.. ಅದು ಆಕೆಯ ಗಂಡನದೇ...ಅಮ್ಮಿಯ ಎದೆಬಡಿತ ವೇಗವಾಯಿತು. ಭೀತಿ ಸಂತೋಷಗಳಿಂದ ಆಕೆ