ಪುಟ:Banashankari.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಹೆದರ್ಕೆ ಒಂದೂ ಇಲ್ಲ ಕಾವೇರಿ, ರಾಜಣ್ಣನ್ನೂ ಸುಶೀನ್ನೂ ನೋಡ್ಬೇಕೂಂತ ಆಸೆ.....ಮಕ್ಕಳು ಪಕ್ದಲ್ಲೇ ಇದ್ದಾಗ..ಸಾಯೋದು ... ಮುತ್ತೈದೆ ಸಾವಿನಷ್ಟೇ ಸುಖ ಅಲ್ಲ?...."

 ಅಧೀರಳಾದರೂ ಕಾವೇರಿ ತಾನು ಅತ್ತು ಅಮ್ಮಿಯ ದುಃಖ ಹೆಚ್ಚಿಸಬಾರದೆಂದು, ತುಟಿ ಬಿಗಿ ಹಿಡಿದು ತನ್ನೊಳಗಿನ ನೋವಿಗೆಲ್ಲ ಬೀಗ ಹಾಕಿದಳು.

ಕಾವೇರಿಯ ಯಜಮಾನರು ಅವಸರದ ಕಾಗದ ಬರೆದರು:

 "ಜೀವ ಉಳಿಯೋ ಪ್ರಶ್ನೆ...ಕಾಗದ ಕಂಡ ತಕ್ಷಣ ಹೊರಟು ಬಾ...ಸುಶೀಲೇನೂ ಬರಬೇಕಂತೆ. ಬರುವುದು ಸಾಧ್ಯವೆ? ನೋಡು... ನೀನಂತೂ ತಡ ಮಾಡ್ಬೇಡ."

ಎರಡು ದಿನ ಬಿಟ್ಟು ಚಿಕ್ಕಮಗಳೂರಿಗೆ ಜನ ಕಳುಹಿಸಿ, ಅಲ್ಲಿಂದ ಬೆಂಗಳೂರಿಗೆ ಅದೇ ಅರ್ಥದ ತಂತಿಯನ್ನೂ ಅವರು ಕೊಡಿಸಿದರು.

                                          ೨೦

ರಾಜಣ್ಣ ಪರೀಕ್ಷೆಗೆ ಓದುತ್ತ ಮನೆಯಲ್ಲೇ ಇದ್ದುದರಿಂದ ಕಾಗದ ತಂತಿಗಳೆರಡೂ ಸಕಾಲದಲ್ಲಿ ಏಕಕಾಲದಲ್ಲಿ ದೊರೆತುವು, ಅವುಗಳನ್ನೋದಿ ರಾಜಣ್ಣ ತಬ್ಬಿಬಾದ, ಎರಡೇ ದಿನಗಳಿದ್ದುವು ಪರೀಕ್ಷೆಗೆ. ಪರೀಕ್ಷೆ ಮುಗಿಸಿ ಹೋಗುವುದೆಂದರೆ ಎರಡು ವಾರಗಳಾದರೂ ಆಗಬಹುದು; ಹೆಚ್ಚೂ ಆಗಬಹುದು. ಆದರೆ ಕಾಗದ–ತಂತಿಯು ಪ್ರತಿ ಪದದಲ್ಲೂ ಕಾತರ ತುಂಬಿತ್ತಲ್ಲ? ತನ್ನ ಅಮ್ಮಿ ಮರಣಶಯ್ಯೆಯಲ್ಲಿರುವಳೆ೦ದೇ ಆ ಸಂದೇಶದ ಅರ್ಥ.

   ಆ ಕಂಗಾಲ ಪರಿಸ್ಥಿತಿಯಲ್ಲಿ ಸುಮ್ಮನೆ ಕುಳಿತು ರಾಜಣ್ಣ ಹೊತ್ತು ಕಳೆಯುವ ಹಾಗಿರಲಿಲ್ಲ. ಆಗಲೆ ಮಧಾಹ್ನ ದಾಟಿತ್ತು.
   ರಾಜಣ್ಣ ಬಿಸಿಯುಸಿರು ಬಿಟ್ಟು ತಾಯಿಯನ್ನು ನೋಡಲು ಹೊರಡುವ ತೀರ್ಮಾನ ಮಾಡಿದ.
  ಪರೀಕ್ಷೆ ದೊಡ್ಡದಲ್ಲ. ಆಮೇಲೂ ಪಾಸಾಗಬಹುದು. ಈ ಭೂಮಿಯ ಮೇಲೆ ತನ್ನ ಇರುವಿಕೆಯನ್ನೇ ಸಾಧ್ಯಗೊಳಿಸಿದ ತಾಯಿಯ ಕೊನೇ ಘಳಿಗೆಯಲ್ಲಿ ಆಕೆಯ ಬಳಿಯಲ್ಲಿರದೆ, ಪರೀಕ್ಷೆಯ ಪ್ರಶ್ನೆಗಳನ್ನು ಉತ್ತರಿಸುವುದು ಸರಿಯಾಗಿರಲಿಲ್ಲ–ಸಾಧ್ಯವಿರಲಿಲ್ಲ.
 ತಂಗಿಯನ್ನೂ ಕರೆದುಕೊಂಡು ಬರಬೇಕೆಂಬುದು ತಾಯಿಯ ಬಯಕೆಯಾಗಿತ್ತು. ತಂಗಿ ತುಂಬು ಗರ್ಭಿಣಿ. ಹಾಗೆಲ್ಲ ಹೊರಟು ಬರಲು ಮಾಧವನಿಗೆ ರಜವಾದರೂ ಎಲ್ಲಿ ದೊರೆಯಬೇಕು?
  ಹೊರಡುವ ಸಿದ್ಧತೆ ಮಾಡಿ, ರಮೆಗೆ ತಿಳಿಸಿ ಬರಬೇಕೆಂದು ರಾಜಣ್ಣ ಬಾಡಿಗೆಯ ಸೈಕಲನ್ನೇರಿ ಅವರ ಮನೆಗೆ ಹೋದ.
   ತನ್ನ ಪರೀಕ್ಷೆ ಮುಗಿಸಿದ್ದ ರಮಾ ಹೊತು ಕಳೆಯಲೆಂದು ಗಾತ್ರದ ಯಾವುದೋ ಪುಸ್ತಕ ಓದುತ್ತ ಕುಳಿತಿದ್ದಳು.ಓದುವುದನ್ನು ಬಿಟ್ಟು ಉರಿಬಿಸಿಲಲ್ಲಿ ಬಂದ ರಾಜಣ್ಣನನ್ನು ಕಂಡು ಆಕೆಗೆ ಆಶ್ಚಯ‍ವಾಯಿತು.