ಪುಟ:Banashankari.pdf/೨೨೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಮ್ಮಿ ಕಣ್ಣಸನ್ನೆಯಿಂದ ರಾಜನನ್ನು ಹತ್ತಿರಕ್ಕೆ ಕರೆದಳು. ರಮೆಯ ಕೈ ಮತ್ತು ಆತನ ಕೈ-ನಿಶ್ಯಕ್ತಳಾದ ಆಮ್ಮಿ ಬಲು ಪ್ರಯಾಸದಿಂದ ಅವುಗಳನ್ನು ಒಂದುಗೂಡಿಸಿದಳು... " ಗಂಡ . . . ಹೇಂಡತಿಯಾಗಿ . . . ಸುಖವಾಗಿ ಬಾಳಿ." ಅದು ಅಮ್ಮಿ ಕೊಟ್ಟ ಅಶೀರ್ವಾದ. " ರಾಜಣ್ಣ . . . ಶುದ್ಧ ಮಗು . . . ಸರಿಯಾಗಿ . . . ನೋಡ್ಕೋ ರಮಾ . . ." ಅದು ರವೆುಗೆ ಹಿತವಚನ. "ಉಳಿದಿದ್ದ ಕೊನೇ ಆಸೆಯೂ ಈಡೇರಿತು . . . ಕಾವೇರಿ . . ." ಕಾವೇರಮ್ಮನಿಗೆ ಈ ಘಟನೆಯ ಹಿನ್ನೆಲೆ ತಿಳಿದಿರಲಿಲ್ಲ ... ಆದರೂ ಆ ದೃಶ್ಯ ನೋಡುತ್ತ ಆಕೆ ಮೌನವಾಗಿ ಕಂಬನಿ ಮಿಡಿದಳು. ...ಸಂಜೆಯ ಹೊತ್ತಿಗೆ ಅಮ್ಮಿ ಬಹಳ ಸುಧಾರಿಸಿದಂತೆ ಕಂಡಿತು. ಅದು ಬಿರುಗಾಳಿಗೆ ಪೂರ್ವದ ಶಾಂತಿ, ಕತ್ತಲಾಗುತ್ತಲೆ ಅಮ್ಮಿಯ ಸ್ವರ ಉಡುಗಿತು. ಆಯಾಸವಾಗದಿರಲೆಂದು ಅವಳನ್ನು ಮಲಗಿಸಿದರು. ಭುಜಕ್ಕೆ ಭುಜ ತಗಲಿಸಿ ನಿಂತಿದ್ದ ರಾಜನನ್ನೂ ರಮೆಯನ್ನೂ ನೋಡುತ್ತಲೇ ಇದ್ದಳು ಅಮ್ಮಿ,ಎಷ್ಟೊಂದು ಅರ್ಥವಿತ್ತೋ ಆ ನೋಟದಲ್ಲಿ ಸಂದೇಶಗಳಿದ್ದವೂ! ನಡುವಿರುಳಿನ ಹೊತ್ತಿಗೆ ಅಮ್ಮಿ ಒಂದು ಕ್ಷಣ ಚಡಪಡಿಸಿದಳು. ಹತ್ತಿರ ಬಂದು ದೇನನ್ನೋ ಓಡಿಸುವಂತೆ ಕೈ ಬೀಸಿದಳು. ಅದು ಸಾವಿಗೆ ಆಕೆ ನೀಡಿದ ಕೊನೆಯ ಪ್ರತಿಭಟನೆ. ಸೋತೆ- ಎನ್ನುವಂತೆ ತಲೆ ಒಂದು ಕಡೆಗೆ ವಾಲಿತು. ಕಣ್ಣುಗಳು ಮುಚ್ಚಿಕೊಂಡುವು. ಅಮ್ಮಿಯ ಅವಸಾನವಾಯಿತು.

ಮರುದಿನ ಬೆಳಿಗ್ಗೆ ಹಳ್ಳಿಯ ಜನರೆಲ್ಲ ಬಂದರು. ತಮ್ಮ ಮಣ್ಣಿನ ಕೂಸಾಗಿದ್ದ ಬನಶಂಕರಿಯನ್ನು ಅವರು ಒಯ್ದರು-ಮಸನಕ್ಕೆ. ಬದುಕಿದ್ದಾಗಲೇ ಸಾವಿರ ಸಾರೆ ಬೆಂದಿದ್ದ ಜೀವ, ಸತ್ತಾಗ ಒಣಗಿದ ತರಗೆಲೆಯ ಹಾಗೆ ಉರಿದುಹೋಯಿತು.


ಆ ಒಂದು ಸಂಜೆ–ರಾತ್ರೆ ಅಲ್ಲಿದ್ದು ಮಾರನೆಯ ದಿನ ರಾಜಣ್ಣನೂ ರಮೆಯೂ ಬೆಂಗಳೂರಿಗೆ ಹೊರಟರು. ಹಾದಿಯಲ್ಲಿ, ರಮೆಯ ಅಂಗೈಯನ್ನು ಭದ್ರವಾಗಿ ಹಿಡಿಯುತ್ತ ರಾಜಣ್ಣ ಹೇಳಿದ: " ಅಮ್ಮಿ ಕೊನೆಗೂ ಹೋಗಿಯೇ ಬಿಟ್ಟಳು ರಮಾ: ಅಂತೂ ಒ೦ದು ಕತೆ ಮುಗಿಯಿತು, ಎಂಥ ರುದ್ರ ಕತೆ!" ವಾತ್ಸಲ್ಯಮಯಿಯಾಗಿ ರಮಾ ರಾಜಣ್ಣನನ್ನು ನೋಡಿದಳು. " ದೇವಿ ಅಂತಾರೆ . . . ದೇವಿ ಅಂದರೇನೋ ನನಗೆ ತಿಳಿದು ರಮಾ . . . ಆದರೆ ಯಾವುದೇ ಭವ್ಯ ದೇವಿಯ ಕಲ್ಪನೆ ಈ ವಾಸ್ತವತೆಗಿಂತ ಯಾವತ್ತೂ ಹೆಚ್ಚಿನದಾಗದು." "ಹೌದು ರಾಜ, ಆಕೆ ದೇವಿ."