ಪುಟ:Banashankari.pdf/೪೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅವನ ನೀಳವಾದ ದೇಹ ಗಾಯಗೊಂಡ ಹಾವಿನಂತೆ ಬಳುಕಿ ಮೈ ಮುರಿಯುತ್ತಿತ್ತು. ಅರ್ಧ ಘಂಟೆಯ ಹೊತ್ತು ಬಲು ಪ್ರಯಾಸದಿಂದ ಕಳೆಯಿತು. ಹಳ್ಳಿಯ ನಾಲ್ಕು ಮೂಲೆಗಳಿಂದ ದೀಪಗಳ ಮೆರವಣಿಗೆ ಬಂತು.... ಕಂದೀಲು... ತಾಳೆಗರಿಯ ಒಡರು .. ಬಡಿಗೆ ದೊಣ್ಣೆ. ಮಾತುಗಳೆಲ್ಲ ಒಂದರಲ್ಲೊಂದು ಬೆರೆತು ಅಸ್ಪಷ್ಟವಾದ ಸ್ವ ಹೊರಟು ವಾತಾವರಣವನ್ನೇ ಕಲಕಿತು. ಸ್ಪಲ್ಪ ಹೊತ್ತಿನಲ್ಲೇ ಅಮ್ಮಿಯ ಮನೆಯಂಗಳದ ತುಂಬ ಜನ ಸೇರಿದರು ಎಲ್ಲರೂ ಮಾತನಾಡುವವರೇ. ಎಲ್ಲರೂ ಸಲಹೆ ಕೊಡುವವರೇ. ಅಮ್ಮಿಯ ರೋದನವೊಂದೇ ಹೃದಯ ಭೇದಕವಾಗಿ ಪ್ರತಿಸ್ಪರ್ಧಿ ಇಲ್ಲದೆ ಮೊರೆಯಿತು. " ನಮ್ಮಣ್ಣನ್ನ ಬದುಕ್ಸೀಪ್ಪಾ! ನಮ್ಮಣ್ಣನ್ನ ಬದುಕ್ಸೀ!" ಮಾಡಬೇಕಾದ್ದನ್ನೆಲ್ಲ ಮಾಡಿದರು. ಘಟ್ಟದ ಕೆಳಗಿನ ಶೀನಪ್ಪ ಆಮೆಯ ನಡಿಗೆಯಿಂದ ಕಾರ್ಯೋನ್ಮುಖನಾದ. ಅವನು ತಂದ ಹಸುರೆಲೆಗಳನ್ನು ಅರೆದು ಒಬ್ಬರು ರಸ ತೆಗೆದರು. ಅವನ ಸೂಚನೆಯಂತೆ ಇನ್ನೊಬ್ಬರು ಹಾವು ಕಚ್ಚಿದ ಜಾಗಕ್ಕೆ ಉರಿಯುವ ಕೆಂಡವನ್ನಿಟ್ಟರು. ಶೀನಪ್ಪ ತನ್ನದೇ ಆದ ವಿಚಿತ್ರ 'ಮಂತ್ರೋಚ್ಚಾರಣೆಯನ್ನೂ ನಡೆಸಿದ, ಕೆಂಡದಿಂದ ಸುಟ್ಟ ಮೇಲೆ, ರಸವನ್ನು ಸುರಿದುದಾಯಿತು. ರಾಮಕೃಷ್ಣ ಸಾವಿನೊಡನೆ ಸೆಣಸಾಡಿದ. ನಿಶ್ಚಲನಾಗಿ ಅವನನ್ನು ಅಂಗಾತ ಮಲಗಿಸಲು ನಾಲ್ವರ ಸಾಮರ್ಥ್ಯ ಬೇಕಾಯಿತು. ಹಾವು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಬಡಿಗೆ ದೊಣ್ಣೆ ತಂದವರು ತಮ್ಮ ಸಿದ್ಧತೆ ವ್ಯರ್ಥವಾಯಿತೆಂದರು. - ಯಾರೋ ಒಬ್ಬರಿಂದ ಮಾತು ಬಂತು. " ಸರ್ಪ ಹೌದೋ ಅಲ್ಲವೋ! ಎಂಥ ಹಾವು ಕಚ್ಚಿದರೂ ರಕ್ತ ಬರುತ್ತೆ." ಚಂದ್ರೋದಯವಾಯಿತು. ಅಷ್ಟರಲ್ಲೆ, ರಾಮಕೃಷ್ಣ ಚಡಪಡಿಸುತ್ತಿದ್ದಂತೆ, ಶೀನಪ್ಪ ಮಂತ್ರೋಚಾರಣೆಯ ಧ್ವನಿಯನ್ನೂ ವೇಗವನ್ನೂ ಹೆಚ್ಚಿಸಿದ. " ಈಗ್ನೋಡಿ. ಇನ್ನೈದ್ನಿಮಿಷದೊಳಗೆ ವಿಷವೆಲ್ಲ ಹೊರಗೆ ಬಂದ್ಬಿಡ್ತದೆ," ಎಂದ.

ಅಷ್ಟರಲ್ಲೆ ಬಲು ಶುಭ್ರವಾದ ದೊಡ್ಡ ಕಂದೀಲು ಬಂತು-ಶಾನುಭೋಗರ ಮನೆಯ ಕಂದೀಲು ಬಂತು-ಶಾನುಬೋಗರ ಮನೆಯ ಕದೀಲು. ಅದನ್ನು ಹೊತ್ತಿದ್ದ ಆಳಿನ ಹಿಂದೆ ಸ್ನಾನದ ಅಂಗವಸ್ತ್ರವನ್ನಷ್ಟೆ ಮೈಮೇಲೆ ಹಾಕಿ ಕೊಂಡಿದ್ದ ಶಾನುಬೋಗರು, ಹಿಂದಿನಿಂದ ಅವರ ಅಳಿಯ, ಅಳಿಯನ ಹಿಂದೆ ಮಗಳು ಕಾವೇರಿ.

ದೊಡ್ಡ ಕಂದೀಲನ್ನೂ ರಾಮಕೃಷ್ಣ ಎದುರುಗಿಟ್ಟರು. ಆ ದೀಪವನ್ನು ನೋಡಿ ಅವನು ಮುಗಳು ನಕ್ಕಂತೆ ತೋರಿತು. ಯಾರನ್ನೋ ಕರೆಯಲು ಅಪೇಕ್ಷಿಸಿದಂತೆ ಅವನ ಕೈ ಚಲಿಸಿತು. ಶೀನಪ್ಪ ಮಂತ್ರೋಚ್ಚಾರಣೆಯನ್ನು ನಿಲ್ಲಿಸಿ ಮೌನವಾದ. ರಾಮಕೃಷ್ಣ ವಿವರ್ಣವಾಗಿದ್ದ ದೇಹದಿಂದ ಪ್ರಾಣವಾಯು ಹೊರಟುಹೋಯಿತು. ಹಲವು ಕಂಠಗಳು "ಹಾ!" ಎಂದುವು.

" ಅಯ್ಯೋ! " ಎನ್ನುತ್ತ ಅಮ್ಮಿ ಮೂರ್ಛೆಹೋದಳು.