ಪುಟ:Banashankari.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನೇವರಿಸಿ, ತನ್ನ ತಲೆಯ ಬದಿಗೊಯ್ದು ನೆಟಿಕೆ ಮುರಿದು, ಸರಕ್ಕನೆ ಅಡುಗೆ ಮನೆಯೊಳಕ್ಕೆ ಹೋದಳು. ಹೋಗುತ್ತಿದ್ದಾಗ ಕಣ್ಣೀರು ಘಳಕ್ಕನೆ ಚಿಮ್ಮಿತು. ಬಹಳ ಹೊತ್ತಾದರೂ ಸುಂದರಮ್ಮ ಹೊರಬರಲಿಲ್ಲವೆಂದು ಅಮ್ಮಿಯೇ ಮಗುವಿ ನೊಡನೆ ಒಳಕ್ಕೆ ಹೋದಳು. ಹಾಲು ಕಾಯಿಸುತ್ತಾ ಒಲೆಯ ಮುಂದೆ ಕುಳಿತಿದ್ದಳು ಸುಂದರಮ್ಮ. ಆಕೆಯ ಕಣ್ಣುಗಳು ಕೆಂಪಗಾಗಿದ್ದುವು.

    "ಇದೇನಕ್ಕಾ-ಕಣ್ಣು?"
    "ಹೊಗೆ ಬನೂ."
   ಅಲ್ಲಿ ಹೊಗೆ ಇತ್ತೋ ಇಲ್ಲವೋ, ಬನಶಂಕರಿ ಅದನ್ನು ಪರಾಮರ್ಶಿಸುವ ಗೊಡವೆಗೆ ಹೋಗಲ್ಲಿಲ. 
     "ಬಾ ಬನೂ, ಇಲ್ಲೇ ಕೂತುಕೋ......"

ಬನಶಂಕರಿ ಮಗುವನ್ನು ಅದರ ಕಾಲುಗಳ ಮೇಲೆ ನಿಲ್ಲಿಸಲೆತ್ನಿಸುತ್ತ, ತಾನು ಸುಂದರಮ್ಮನ ಪಕ್ಕದಲ್ಲೇ ಕುಳಿತುಕೊಂಡಳು. ಒಲೆಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನೋಡುತ್ತ ಸುಂದರಮ್ಮನೆಂದಳು:

   "ಇನ್ನು ಆರು ತಿಂಗಳ ಮೇಲೆ ನಮ್ಮವರು ಬೆಂಗಳೂರಿಗೆ ಹೋಗಾರೆ. ಅಲ್ಲಿಯ ಆಚಾರ ವಿಚಾರವೇ ಬೇರೆ. ಈ ಊರಿನವರ ಹಾಗಲ್ಲ, ಅದು ದೊಡ್ಡ ಶಹರ. ಅಲ್ಲಿ ಪರಿ ಚಯದವರ ಕೈಲಿ ಮಾತಾಡಿ ವಿಚಾರಿಸಿ ಏನಾದರೂ ಮಾಡ್ತಾರಂತೆ, ಹುಡುಕ್ತಾರಂತೆ."
 ಹೊo ಎನ್ನಲಿಲ್ಲ ಬನಶಂಕರಿ.
ಸುಂದರಮ್ಮ ದೃಷ್ಟಿ ಹೊರಳಿಸಿ ಆಕೆಯನ್ನು ನೋಡಿದಳು.
ಬನಶಂಕರಿ ಮುಖ ಅಷ್ಟಗಲವಾಗಿತ್ತು.ಒಲೆಯ ಬೆಂಕಿ ಎದುರು ಅದು ಮತ್ತಷ್ಟು ಕೆಂಪಾಗಾಗಿತ್ತು. 
ಒಲೆಯ ಮೇಲಿರಿಸಿದ್ದ ಹಾಲು ಉಕ್ಕೇರುತ್ತ ಬಂತು. ಅದನ್ನೆ ನೋಡುತ್ತಿದ್ದ ಮಗುವೆಂದಿತು :

" ಅಂ.....ಶೀ......"

ರಾಮಶಾಸ್ತ್ರಿ ಬೆಂಗಳೂರಿಗೆ ಹೋಗಿ ಬಂದುದಾಯಿತು. ಆತ ಬಂದುದನ್ನು ತಿಳಿದ ಬನಶಂಕರಿ ಅವರ ಮನೆಯತ್ತ ಕಾಲಿಡುವುದಕ್ಕೆ ಅಳುಕಿದಳು. ಅಸ್ಪಷ್ಟವಾದ ಮಧುರ ನಿರೀಕ್ಷೆಯೊಂದೇ ಅವಳ ಜೀವನದ ಹೊಲವನ್ನು ಹಸುರಾಗಿ ಇರಿಸಿದ್ದ ಜಲಾಶಯ. ಆ ಜಲಾಶಯಕ್ಕೆ ಕೋಡಿ ಬೀಳುವಂತಹ ವಾರ್ತೆಯನ್ನೇನಾದರೂ ಸುಂದರಮ್ಮ ಕೊಟ್ಟರೆ? ಅಂತಹ ಆಘಾತವನ್ನು ಇದಿರಿಸಲು ಆಕೆ ಸಿದ್ದಳಾಗಿರಲಿಲ್ಲ. ಆದರೂ ಬಾಗಿಲ ಬಳಿ ಸಪ್ಪಳ ವಾದರೆ ಸಾಕು, ಸುಂದರಮ್ಮ ಬಂದಳು, ಮುಂದೇನಿನ್ನು ?–ಎಂಬ ಪ್ರಶ್ನೆ ಅವಳನ್ನು ಗೊಂದಲದಲ್ಲಿ ಕೆಡವುತ್ತಿತು, ಅಜ್ಜಿಗೆ ಈ ವಿಷಯ ಹೇಗೆ ತಿಳಿಸಬೇಕು?–ಎಂಬ