ಪುಟ:Banashankari.pdf/೮೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಹಲ್ಲುಗಳಿಲ್ಲದ ಒಸಡುಗಳನ್ನು ಒಂದಕ್ಕೊಂದು ಆನಿಸಿ, ಕ್ಷಣಕಾಲ ಮೌನವಾಗಿದ್ದು ಅಜ್ಜಿ ಬೇಕೆಂದೇ ಸ್ವರವೇರಿಸಿ ಕೇಳಿದಳು: ಆತನ ಉತ್ತರ ತಡವರಿಸಿತು. ಆದರೂ ನಗುತ್ತ ಹೇಳಿದ: " ಏನೂ ಇಲ್ಲ.. ಈಗೀಗ ಸಾಯಂಕಾಲವೆಲ್ಲ ಮನೇಲೇ ಇಲ್ತಿಯಾ–ಅಂದೆ." " ಇರ್ತಿನಿ! ಅಲ್ದೆ ಮತ್ತೆ ಸುಡುಗಾಡಿಗೆ ಹೋಗ್ಬೇಕೇನು ? ಅವ್ನಿಂದ ಆಜ್ಞೆ ಬರೋಕ್ಮುಂಚೆ ನಾನೇ ಸುಡುಗಾಡಿಗೆ ಹೋಗ್ಲೇನು?" ಮಠದವನು ಅಲ್ಲಿ ನಿಲ್ಲಲಿಲ್ಲ. ಬಳಿಕ ಅಜ್ಜಿ ಕೇಳಿಸುವವರಿಗೆ ಅರ್ಥವಾಗದ ಹಾಗೆ ಏನನ್ನೋ ಗೊಣಗುತ್ತ ಮುಂದೆ ನಡೆದಳು. ಒಂದು ರಾತ್ರೆ ಅಮ್ಮಿ–ಅಜ್ಜಿಯರು ನಿದ್ದೆ ಹೋಗಲು ಸಿದ್ಧತೆ ಮಾಡುತ್ತಿದ್ದಾಗಲೇ ಮನೆಯ ಬಾಗಿಲನ್ನು ಧಪಧಪನೆ ಬಡೆದ ಸದ್ದಾಯಿತು. ಸುಂದರಮ್ಮ ಹಾಗೆ ಎಂದೂ ಕದ ಬಡೆದವಳಲ್ಲ. ಯಾವುದೋ ಗಂಡಾಂತರ ಬಂತೆಂದು ಆಕೆಯ ಎದೆ ಡವಡವನೆ ಹೊಡೆದು ಕೊಂಡಿತು ಆದರೂ ಅಮ್ಮಿಕಂಗಾಲಾಗಲಿಲ್ಲ. "ಯಾರೇ ಅದು ಕದ ತಟ್ತಿರೋದು ? ಸುಂದರಮ್ಮೇನೆ?" ಎಂದು ಆಜ್ಜಿ ಮೊಮ್ಮಗಳನ್ನುದ್ದೇಶಿಸಿ ಕೇಳಿದಳು. ಮೊಮ್ಮಗಳು ಉತ್ತರವೀಯಲಿಲ್ಲ. ಉಸಿರು ಹಿಡಿದು ಕ್ಷಣಕಾಲ ನಿಂತಳು. ಮತ್ತೊಮ್ಮೆ ಹಿಂದಿನಂತೆಯೆ ಸದ್ದಾಯಿತು. " ಯಾರದು? " ಎಂದು ಅಮ್ಮಿ ತನಗೆ ತಾನೇ ಧೈರ್ಯತುಂಬುವಂತಹ ಗಡಸು ಸ್ವರದಲ್ಲಿ ಕೇಳಿದಳು. ಉತ್ತರ ಬರಲಿಲ್ಲ. ಎರಡು ನಿಮಿಷಗಳ ಮೌನದ ಬಳಿಕ ಟಕ್ ಟಕ್ ಸದ್ದು. ಆಮೇಲೆ ಕೃತಕವಾಗಿ ರಾಗವೆಳೆದ ಸ್ವರ: "ಬಾಗಿಲೂ.. "

ಟಕ್ ಟಕ್ ಸದ್ದು ಮತ್ತು ಆ ಸ್ವರ ಬಾ–ಗಿ—ಲೂ—...ಸುಂದರಮ್ಮನ ಮನೆಯ ಮುಂದೆ ಗಂಡ ರಾಮಶಾಸ್ತ್ರಿ ಹಾಗೆ ಕದ ತಟ್ಟಿ ' ಬಾಗಿಲೂ' ಎಂದಾಗಲೆಲ್ಲ ಬನಶಂಕರಿಗೆ ಪುತ್ರಿ ಸಾರೆಯೂ ಏಕರೀತಿಯ ವಿಶೇಷ ಅನುಭವವಾಗುತ್ತಿತು. ಈ ದಿನ ಸದ್ದಾಗುತ್ತಿರುವುದು ತನ್ನ ಮನೆಯ ಎದುರು; ಆ ಸ್ವರ ಬರುತ್ತಿರುವುದು ತನ್ನನ್ನು ಉದ್ದೇಶಿಸಿ!

ಬವಳಿ ಬಂದ ಹಾಗಾಯಿತು ಅಮ್ಮಿಗೆ. ಆದರೂ ಆಕೆ ಕರ್ಕಶ ಧ್ವನಿಯಲ್ಲಿ ಕಿರಿಚಿದಳು. ಯಾರ್ರಿ ಅದು? ಅದು ಯಾರ್ರೀ?" ಮತ್ತೆ ಬಾಗಿಲ ಮೇಲೆ ಸದ್ದು . "ನಾನು ಚಿನ್ನಾ!" "ಯಾವನೋ ಅವನು ಬಡ್ಡೀಮಗ? ಬಂದ ತಾಳು!" ಎಂದು ಅಜ್ಜಿ ಎದ್ದು ನಿಲ್ಲುತ್ತ ಆಕ್ರೋಶ ಮಾಡಿದಳು. ಆದರೆ ವೃದ್ಧಯ ಆ ಸ್ವರಕ್ಕೆ ಅಂಜಿ ಆತ ಓಡಿ ಹೋಗುವಂತೆ ತೋರಲಿಲ್ಲ.