ಪುಟ:Banashankari.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ

ಕಾಯುತ್ತ ಕುಳಿತಿದ್ದರೂ ಹೀಗಾಯಿತಲ್ಲಾ!

" ಅಜ್ಜೀ ಅಜ್ಜೀ! ಅಯ್ಯಯ್ಯೋ! ಅಯ್ಯೋ! ಅಜ್ಜೀ- ಓ ಅಜ್ಜೀ!" ಒಡೆದ ಗಂಟಲಿನಿಂದ ಅಳು ಹತ್ತು ದಿಕ್ಕುಗಳತ್ತ ಹರಿಯಿತು. ಅಮ್ಮಿ ಎಳೆಯ ಮಗುವಿನ ಹಾಗೆ ಗೋಳಾಡಿದಳು.

  "ಏನಾದರೂ ಮಾಡೀಪ್ಪಾ!! ಉಳಿಸೀಪ್ಪ ನನ್ನಜ್ಜೀನ!--ಅಯ್ಯಯ್ಯೋ!!--." 
ಉಳಿಸುವ ಕೆಲಸಕ್ಕೆ ಸಂಬಂಧಿಸಿ ಅವರು ಮಾಡುವುದೇನೂ ಇರಲಿಲ್ಲ, ಬನಶಂಕರಿ, ಅಜ್ಜಿಯ ಶವದ ಮೇಲೆ ಮುಖವಿಟ್ಟು ಹಣೆಹಣೆ ಚಚ್ಚಿಕೊಳ್ಳುತ್ತಾ  ಕೂದಲು ಕಿತ್ತು ಕೊಳ್ಳುತ್ತಾ ರೋದಿಸಿದಳು.
ನಾರಾಯಣರಾಯರು ಸಮಾಧಾನಪಡಿಸಲೆಂದು ಎರಡು ಮಾತು ಅ೦ದರು : 
"ಅಳಬಾರದಮ್ಮ.. ಅಳಬಾರ್ದು.. ಅದೆಲ್ಲಾ ನಮ್ಕೈಲಿದೆಯೆ?" 
ಅದು ಅಮ್ಮಿಯ ಪಾಲಿಗೆ ಹೊಸ ಮಾತೇನೂ ಆಗಿರಲಿಲ್ಲವಲ್ಲ! ಹಿಂದೆಯಾ ಬಾರಿ ಬಾರಿಗೆ ಅಂದಿದ್ದರು ಯಾರು ಯಾರೋ : "ನಮ್ಕೈಲಿದೆಯೆ?"         "ನಮ್ಕೈಲಿದೆಯೆ?"  ಅಮ್ಮಿಗೆ ಬೇಕಾಗಿದ್ದುದು ವೇದಾಂತವಲ್ಲ, ಹಾಲು ಹಸುಳೆಯಾಗಿದ್ದ ದಿನದಿಂದ ತನ್ನನ್ನು ಸಾಕಿ ಸಲಹಿದ್ದ ಅಜ್ಜಿಯ ಅವಶ್ಯತೆ ಇತ್ತು ಆಕೆಗೆ.

"ಯಾರಾದರೂ ಉಳಿಸೀಪ್ಪಾ ನಮ್ಮಜ್ಜೀನಾ!! ಉಳಿಸೀಪ್ಪಾ!!"

ಆಕೆಯ ಕೈಹಿಡಿದು ದೂರವೆಳೆದು ಶವದಿಂದ ಅವಳನ್ನು ಬೇರ್ಪಡಿಸಬೇಕೆಂದು ತೋರಿತು ನಾರಾಯಣರಾಯರಿಗೆ, ಆದರೆ ಅವರು ಹಿಂಜರಿದರು. ಏನೋ ನೆನಪಾದವರಂತೆ ಗಡಬಡಿಸಿ ಎದ್ದರು: ಆ ಮನೆಯಿಂದ ಹೊರಬಿದ್ದು ರಾಮಶಾಸ್ತ್ರಿಯ ಮನೆಯ ಎದುರು ನಿಂತು ಶಾಸ್ತ್ರಿಯ ಹೆಸರು ಹಿಡಿದು ಗಟ್ಟಿಯಾಗಿ ಕೂಗಿದರು.

ಆದರೆ ಸುಂದರಮ್ಮನಿಗೆ ಆಗಲೆ ಎಚ್ಚರವಾಗಿತ್ತು, ಆಕೆ ದೀಪ ಹಚ್ಚಿದಳು. ಅಮ್ಮಿಯ ರೋದನ, ಮುಂಬೆಳಗಿನ ಮಾನವನ್ನು ಭೇದಿಸಿಕೊಂಡು ದುಃಖದ ಸಂದೇಶ ದೊಡನೆ ದೂರ ದೂರಕ್ಕೆ ಸಾಗಿತು. ಕದ ತೆರೆಯುತ್ತಾ ರಾಮಶಾಸ್ತ್ರಿಯೆಂದ: "ನೀವು!" –ಹಾಗೆ ಹೇಳಿದ್ದರೂ ಆತನ ಯೋಚನೆ ಅಮ್ಮಿಯ ಮನೆಯತ್ತ ಆಗಲೆ ಧಾವಿಸಿತ್ತು. ನಾರಾಯಣರೇನೋ ಅಂದರು:

"ಸ್ನಾನಕ್ಕೇಂತ ನದೀ ಕಡೆಗೆ ಇದೇ ಈಗ ಹೊರಟಿದ್ದೆ. ಅಳೋದು ಕೇಳಿಸ್ತು."
ಆದರೆ ಅವರ ಉತ್ತರವನ್ನು ಕೇಳುವ ತಾಳ್ಮೆ ಆ ದಂಪತಿಗೆ ಇರಲಿಲ್ಲ, ಅವರಿಬ್ಬರೂ ಅಮ್ಮಿಯ ಮನೆಯೊಳಕ್ಕೆ ಬಂದರು. ರಾಯರೂ ಅವರನ್ನು ಹಿಂಬಾಲಿಸಿದರು.

ಇಷ್ಟು ವರ್ಷ ಸ್ವಲ್ಪ ಸ್ವಲ್ಪವಾಗಿಯೇ ನಿರ್ಗತಿಕಳಾಗುತ್ತ ಬಂದಿದ್ದ ಅಮ್ಮಿ ಈಗ ಸಂಪೂರ್ಣವಾಗಿ ಅನಾಥಳಾಗಿದ್ದಳು. ರಾಮಶಾಸ್ತ್ರಿಯಾಗಲೀ ಸುಂದರಮ್ಮನಾಗಲೀ ಅಂತಹ ಸಂದರ್ಭವನ್ನು ನಿರೀಕ್ಷಿಸಿರಲಿಲ್ಲವೆಂದಲ್ಲ, ಆದರೆ ಆವರೆಗೆ ಇದ್ದುದು ನಿರೀಕ್ಷೆ ಮಾತ್ರ. “ನಾಳೆಯ ಗತಿ?" ಎಂದಷ್ಟೆ ಅಷ್ಟರವರೆಗೆ ಯೋಚನೆಯಾಗಿದ್ದುದು ಈಗ ವಾಸ್ತವ ಪ್ರಶ್ನೆಯಾಗಿತ್ತು.