ಪುಟ:Banashankari.pdf/೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
                ಬನಶಂಕರಿ 

ಸೋದರಿಯ ದುರ್ಗತಿಗಾಗಿ ಸುಂದರಮ್ಮನೂ ಎರಡು ನಿಮಿಷ ಕಂಬನಿ ಮಿಡಿದಳು. ಹಾಗೆ ಕಣ್ಣೋರೆಸಿಕೊಂಡಾಗಲೂ ಆಕೆ ಅಮ್ಮಿಯ ಮೈದಡವುತ್ತ ಅಂದಳು : "ಸಾಕಮ್ಮ ಇನ್ನು, ಸಾಕು ಬನೂ.... ಅತ್ತರೆ ವಾಪಸು ಬರಾರೇನು ?" ಸುಂದರಮ್ಮನಿಗೆ ತೆಕ್ಕೆಬಿದ್ದು ಮತ್ತೂ ಗಟ್ಟಿಯಾಗಿ ಅಮ್ಮಿ ಅತ್ತಳು; " ಅಯ್ಯೋ ಅಕಾ! ನನ್ನ ಬಾಳು ಹೀಗಾಯ್ತಲ್ಲೇ!.. ಅಯ್ಯೋ!" ಬೆಳಗಾಯಿತು. ಹತ್ತಿರದ ಬೇರೆ ಮನೆಗಳಿಂದಲೂ ಜನ ಬಂದು ಬಾಳು ಬರಿದಾದ ಆ ದೃಶ್ಯವನ್ನು ನೋಡಿದರು. "ನೀವಿದೀರಲ್ಲಪ್ಪ, ನಾನು ಹೊರಡ್ಡ್ತೀನಿ .." ಎಂದರು ನಾರಾಯಣರಾಯರು ರಾಮಶಾಸ್ತ್ರಯನ್ನುದ್ದೇಶಿಸಿ. "ಹೂಂ ಹೊರಡಿ... ದೇವಸ್ಥಾನಕ್ಕೆ ಹೋಗೋಕೆ ಹೊತ್ತಾಗುತ್ತಲ್ಲ?" "ಸ್ನಾನ ಬೇರೆ ಆಗಿಲ್ಲ." "ಹೌದೌದು, ಹೊರಡಿ .ನಾವಿದ್ದೀವಿ." ... ಆ ದಿನ ಅಜ್ಜಿಯ ಪಾರ್ಥಿವ ಶರೀರವನ್ನು ಕಾಡು ಸೌದೆ ಸುಟ್ಟ ಬೂದಿ ಮಾಡಿತು. ಸುಖದುಃಖಗಳ ಕುಲುಮೆಯಲ್ಲಿ ಕುದಿದು ಕರಗಿ ಹೋಗಿದ್ದ ಜೀವ... ಅಂತೂ ಕೊನೆಗೊಮ್ಮೆ ಅದಕ್ಕೆ ಸಾವೂ ಅಲ್ಲ ಬದುಕೂ ಅಲ್ಲ ಎನ್ನುವಂತಹ ಸನ್ನಿವೇಶದಿಂದ ಮುಕ್ತಿ ದೊರಕಿತು. ಅಳು ನಿಲ್ಲಿಸಿದ ಬನಶಂಕರಿ ಬಹಳ ಕಾಲ ಯೋಚಿಸಿದಳು : ಮುಂದೇನಾಗುವುದು? ಏನಾಗುವುದು ಮುಂದೆ? ಪ್ರಶ್ನೆ ಬಗೆಹರಿಯಲಿಲ್ಲ. ಅದು ಶೂನ್ಯದಲ್ಲಿ ಮನಸ್ಸಿನ ತೂಗಾಟ. ಹೀಗೆ ತೂಗುತ್ತ ತೂಗುತ್ತ ಯೋಚಿಸುವ ಕೆಲಸವನ್ನೆ ಬಿಟ್ಟುಕೊಟ್ಟಿತು ಆಕೆಯ ಮೆದುಳು. "ಬನೂ, ನಡಿಯಮ್ಮ ನಮ್ಮನೆಗೆ ..." ಉತ್ತರವಿಲ್ಲದೆ ಆಮ್ಮಿ ನಡೆದಳು. "ಬನೂ.. ನೀರು ಕಾದಿದೆ. ಸಾನ ಮಾಡಮ್ಮ." ಆ ಮಾತಿನ ಅರ್ಥ ಅಮ್ಮಿಗಾಗಲಿಲ್ಲ. “ ಹೂಂ” "ಸ್ನಾನ ಮಾಡೇ." ಶವಕ್ಕೆ ಆಗಲೇ ಸ್ನಾನ ಮಾಡಿಸಿದ್ದರಲ್ಲ? ಮತ್ತೊಮ್ಮೆ ಯಾಕೀಗ? ಬೇರೆ ಹಾದಿ ಇಲ್ಲವೆಂದು ಸುಂದರಮ್ಮ ಮೆಲ್ಲನೆ ಬನಶಂಕರಿಯ ತೋಳು ಹಿಡಿದು ಎಬ್ಬಿಸಿ ಬಚ್ಚಲು ಮನೆಗೆ ಕರೆದೊಯ್ದಳು. ಆ ರೀತಿ ಸ್ನಾನ.. ಊಟ ಅದಕ್ಕಿಂತ ಭಿನ್ನವಾಗಿರಲಿಲ್ಲ. "ಏಳಮ್ಮ ಊಟಕ್ಕೇಳು." “ಹುಂ" "ಬಡಿಸಿದೀನಿ ಏಳು ! "