ಪುಟ:Chirasmarane-Niranjana.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦

ಚಿರಸ್ಮರಣೆ

ದಿನಾಚರಣೆಯಲ್ಲಿ ಭಾಗವಹಿಸಲು. ಈ ಎರಡು ಭೇಟಿಗಳ ವೇಳೆಯಲ್ಲೂ ನಾನಿದ್ದುದು ರಂಗದ ಮೇಲೆ. ಅದರೊಂದಿಗೆ, ವಿಶಿಷ್ಟವಾದ ಇನ್ನೊಂದು ಪಾತ್ರವೂ ಇತ್ತು. ಅದು ರಂಗದ ಮೇಲಿದ್ದಾಗಲೂ ಬರಹಗಾರನಾಗಿ ತುಸು ದೂರವಿರುವುದು, ನಡೆಯುತ್ತಿದ್ದುದನ್ನು ವಸ್ತುನಿಷ್ಠವಾಗಿ ಈಕ್ಷಿಸಿ ಅರ್ಥೈಸುವುದು, ಅದನ್ನೆಲ್ಲ ನನ್ನ ಆಳಕ್ಕೆ ಇಂಗಿಸಿಕೊಳ್ಳುವುದು....
ನಾನು ನೋಡನೋಡುತ್ತಿದ್ದಂತೆಯೇ ಕಯ್ಯೂರಿನ ಶೋಷಿತರು ಇತಿಹಾಸ ರಚಿಸಿದ್ದರು, ಕತೆಯಾಗಿದ್ದರು, ದಂತಕಥೆಯಾಗಿದ್ದರು....
ಕಯ್ಯೂರಿಗೆ ಭೇಟಿ ನೀಡಿದಾಗ ನಾನಿದ್ದುದು ರಂಗದ ಮೇಲೆ ಎಂದೆನಲ್ಲ? ಆ ಹೊತ್ತಿಗಾಗಲೇ ನಾನು ಕಮ್ಯೂನಿಸ್ಟ್ ಪಕ್ಷ ಸೇರಿದ್ದೆ. ಅದು ಭೂಗತ ಅವಸ್ಥೆಯಿಂದ ಹೊರಬಂದು ಬೆಳೆಯತೊಡಗಿದ್ದ ಪಕ್ಷ. ನನ್ನ ರಾಜಕೀಯಪ್ರಜ್ಞೆ ಪ್ರಖರಗೊಂಡ ರೀತಿಯ ಹಿನ್ನಲೆಯಲ್ಲಿ ಆ ಹೆಜ್ಜೆಯನ್ನು ನಾನಿಟ್ಟುದು ತರ್ಕಬದ್ಧವಾಗಿಯೇ ಇತ್ತು. ಅದು ಸಂಭವಿಸಿದ್ದು ಹೀಗೆ:
ಮಂಗಳೂರಿಗೂ ಮುಂಬಯಿಗೂ ಉದ್ಯೋಗದ ನಂಟು. ಆ ಮಹಾನಗರದ ಬಾಣಲೆಯಲ್ಲಿ ಕಮ್ಯೂನಿಸ್ಟರಾಗಿ ಅರಳಿದ 'ಕನ್ನಡಿಗರು' ಬಹಳ ಜನ. ಅವರಲ್ಲಿ ಪ್ರಮುಖರು: 1920ರ ದಶಕದಲ್ಲಿ ಎಸ್. ವಿ. ಘಾಟೆ; 1930ರ ದಶಕದಲ್ಲಿ ಎಂ. ಬಿ. ರಾವ್, ಉಪಾಧ್ಯಾಯ ಸೋದರರು ಮತ್ತು ಶಾಂತಾರಾಮ್ ಪೈ; 1940ರ ದಶಕದಲ್ಲಿ ತೋನ್ಸೆ ಸಂಜೀವ ಹೆಗ್ಡೆ.... ನಾಜಿ ಪಡೆಗಳು ಸೋವಿಯತ್ ಒಕ್ಕೂಟಕ್ಕೆ ನುಗ್ಗಿದ ಅನಂತರ ಭಾರತ ಕಮ್ಯೂನಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ಬ್ರಿಟಿಷ್ ಸರಕಾರ ಹಿಂತೆಗೆದುಕೊಂಡಿತು. ನೂರಾರು ಸೆರೆಮನೆಗಳಿಂದ ಸಹಸ್ರಾರು ಕಮ್ಯೂನಿಸ್ಟ್ ಮುಖಂಡರು ಹೊರಬಿದ್ದರು. ಅವರಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ನಿಯೋಜಿತರಾದವರು ಉಪಾಧ್ಯಾಯ ಸೋದರರು. ಅವರು ಮಂಗಳೂರಿಗೆ ಬಂದರು. ಮೊದಲು ಅಣ್ಣ, ಬಳಿಕ ತಮ್ಮ. ಆ ತನಕ ಅಲ್ಲಿ ಕಾರ್ಮಿಕಕ್ಷೇತ್ರದಲ್ಲಿ ದುಡಿಯುತ್ತಿದ್ದ ಸೋನ್ಸ್ ಮತ್ತಿತರರನ್ನು, ವಿದ್ಯಾರ್ಥಿರಂಗದ ಹರಿದಾಸ ಆಚಾರ್, ಶಿವಶಂಕರರಾವ್, ಕಕ್ಕಿಲ್ಲಾಯಾದಿ ಮುಖಂಡರನ್ನು ಕಂಡರು. ನನ್ನ ಮೇಲೂ ಕಣ್ಣು ಹಾಯಿಸಿದರು. ನನ್ನ ಬಾಂಧವ್ಯ ಕಾಸರಗೋಡಿನ ದಕ್ಷಿಣಕ್ಕಿದ್ದ ಜನರ ಜತೆ. ಅವರಲ್ಲೊಬ್ಬರು- 1930ರ ದಶಕದಲ್ಲಿ ಹೈಸ್ಕೂಲಿನ ಅಧ್ಯಾಪಕ ವೃತ್ತಿ ಬಿಟ್ಟು 'ಕ್ರಾಂತಿಯಾರಿ'ಯಾದ ಸಿ. ಎಂ. ಕುಂಞರಾಮನ್ ನಾಯರ್- ಮಂಗಳೂರಿನಲ್ಲಿ ಒಂದು ಮುದ್ರಣಾಲಯ ಇಟ್ಟುಕೊಂಡಿದ್ದರು. ಅವರು ನನ್ನ ಹಿರಿಯ ಗೆಳೆಯರಾದರು. ಒಟ್ಟು ಪರಿಣಾಮ- ನಾನು ಪಕ್ಷದ ಸದಸ್ಯನಾದದ್ದು.