ಪುಟ:Chirasmarane-Niranjana.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ


ಅಮವಾಸ್ಯೆಯ ಅದೊಂದು ರಾತ್ರಿ ತರಗತಿ ಮುಗಿದು ಕೊನೆಯದಾಗಿ ಹೊರಬಿದ್ದವರು ಮಾಸ್ತರು,ಕಣ್ಣ ಮತ್ತು ಅಪ್ಪು.ಮಾಸ್ತರು ತಮ್ಮ ಶಾಲೆಯತ್ತ ತಿರುಗಿದ ಮೇಲೆ ಕಣ್ಣ-ಅಪ್ಪು ಇಬ್ಬರೇ ಹಾದಿ ನಡೆದರು.

"ನಮ್ಮನೆವರೆಗೂ ಬಾ ಅಪ್ಪು,ಅಮ್ಮ ಇವತ್ತು ಸಿಹಿಗಡುಬು ಮಾಡಿಟ್ಟಿದ್ದಾಳೆ.ತಿಂದು ಹೋಗುವಿಯಂತೆ"ಎಂದು ಕಣ್ಣ ಅಪ್ಪುವಿಗೆ ಆಹ್ವಾನ ನೀಡಿದ.

"ಬೇಡ ಕಣ್ಣ, ತಡವಾಗ್ತದೆ. ಇನ್ನೊಂದ್ಸಲ ಯಾವತ್ತಾದರೂ ಬರ್‍ತೇನೆ" ಎಂದು ಹೇಳಿ ಅಪ್ಪು ತಪ್ಪಿಸಿಕೊಳ್ಳಲು ಯತ್ನಿಸಿದ.

"ನೀನು ಹೀಗೆ ಹೇಳ್ತಿರೋದು ಮೂರನೆಯ ಸಲ. ಊಹುಂ, ಇವತ್ತು ನೀನು ಬಂದೇ ತೀರ್‍ಬೇಕು. ಕಡುಬು ತಿಂದಾದ್ಮೇಲೆ ನಿನ್ನ ಮನೆವರೆಗೂ ಬಿಟ್ಟು ಬರ್ತೇನೆ."

ಈ ಆಗ್ರಹದ ಕರೆಯನ್ನು ನಿರಾಕರಿಸಲಾರದೆ, ಅಪ್ಪು ಕಣ್ಣನನ್ನು ಹಿಂಬಾಲಿಸಿದ. ಆತನ ಗುಡಿಸಲು ಇದ್ದುದು ನದಿಯ ದಡದಲ್ಲಿ. ದೋಣಿ ನಡೆಸುತ್ತಿದ್ದ ತಂದೆ ನೀರು ಪಾಲಾದಾಗ ಕಣ್ಣ ಎಳೆ ಮಗು. ತಂದೆ ಸತ್ತ ಆ ಮಗುವನ್ನು ಬಡತಾಯಿ ಸಾಕಿ ದೊಡ್ಡವನಾಗಿ ಮಾಡಿದ್ದಳು. ಇದ್ದ ಇಷ್ಟಗಲ ಜಾಗದಲ್ಲಿ ತರಕಾರಿ ಬೆಳೆಸಿ, ನೀಲೇಶ್ವರದ ಪೇಟೆಗೊಯ್ದು ಮಾರಿ ಮಗನ ಲಾಲನೆ ಪೋಷಣೆ ನಡೆಸಿದ್ದಳು. ಮಗ ದೊಡ್ಡವನಾದ ಮೇಲೂ-ಆ ತರಕಾರಿ ತೋಟದ ಕೆಲಸವನ್ನೆಲ್ಲ ಒಬ್ಬನೆ ಮಾಡಲು ಸಮರ್ಥನಾದ ಮೇಲೂ-ಆ ತಾಯಿ ದುಡಿಯುವುದನ್ನು ಬಿಟ್ಟಿರಲಿಲ್ಲ. ನೆರೆಗೂದಲಿನ, ಸುಕ್ಕು ಮುಖದ ಆ ಜೀವ ಕಣ್ಣನನ್ನು ಈಗಲೂ ಎಳೆಯ ಮಗುವಾಗಿಯೇ ಕಾಣುತ್ತಿತ್ತು.

....ಆ ಹೊಲದ ಈ ಕೊನೆಯಲ್ಲಿ ಹಾದಿಗಳು ಕವಲೊಡೆದಿದ್ದುವು. ಎಡಕ್ಕೆ ತಿರುಗಿ ನಡೆದರೆ, ಕಣ್ಣನ ಗುಡಿಸಲು. ಆದರೆ ಕಣ್ಣ ತಿರುಗದೆ ತಡೆದು ನಿಂತು, ಬಲಕ್ಕೆ ನೋಡಿದ. ಅಲ್ಲೇ ಕೂಗಳತೆಯ ದೂರದಿಂದ ಒಂದು ಹೆಣ್ಣಿನ ಒಂದು ಗಂಡಿನ ಧ್ವನಿಗಳು ತೀವ್ರಗತಿಯಿಂದ ಕೇಳಿಸುತ್ತಿದ್ದುವು. ಕಣ್ಣ ಆಲಿಸಿದ. ಅಪ್ಪುವೂ ಕಿವಿ ನಿಗುರಿಸಿದ. ಉದ್ವೇಗದ ಜಗಳದ ನುಡಿಗಳು....ಅಸಹಾಯಕತೆಯಿಂದ ಕಂಪಿಸುತ್ತಿದ್ದ ಹೆಣ್ಣು ಧ್ವನಿ. ಗಂಡಿನ ಕೆಣಕುತ್ತಿದ್ದ ಗಡಸುಸ್ವರ.

ಕಣ್ಣ ಕಾತರಗೊಂಡು ಕೇಳಿದ:
"ಅಪ್ಪು, ಕೇಳಿಸ್ತಾ?"
"ಹೂಂ.ಅದು ಯಾರ ಮನೆ?"