ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೬
ಚಿರಸ್ಮರಣೆ
ಯೋಚಿಸುತ್ತಿದ್ದುದು ಮುಗಿದು, ಮಾಸ್ತರು ಮೌನವನ್ನು ಮುರಿದರು:
"ಕಣ್ಣ, ನೀನೇನೂ ಚಿಂತಿಸ್ಬೇಡ. ಅವರಿಗೆ ಸಂಶಯ ಬಂದೇ ಬಂದೀತು.ಆದರೆ
ನೀನು, ಏನೂ ಆಗೇ ಇಲ್ಲ ಅನ್ನೋಹಾಗೆ ಇದ್ದುಬಿಡು."
ಈ ಒಂದು ವಿಷಯ ಪ್ರಾಯಶಃ ಇವರಿಗೆ ತಿಳಿದಿರಲಾದೆಂದು ಅಪ್ಪುವೆಂದ:
"ಅವನು ಅಲ್ಲಿಲ್ಲ. ಎದ್ದು ಹೋಗಿದ್ದಾನೆ."
"ಹೂಂ. ನಸುಕಿನಲ್ಲೇ ಹೋದ. ಕುಂಟಿಕೊಂಡು ಜಮೀನ್ದಾರರ ಮನೆ ಕಡೆ
ಹೋದದ್ದನ್ನು ನಾನೇ ನೋಡ್ದೆ" ಎಂದ ಕಣ್ಣ.
ಮಾಸ್ತರು ಕಣ್ಣನ ಮುಖವನ್ನೇ ನೋಡುತ್ತ ಇನ್ನೊಂದು ಪ್ರಶ್ನೆ ಕೇಳಿದರು:
"ದೇವಕಿ ಸ್ವಲ್ಪ ದಿವಸ ನಿಮ್ಮನೇಲೇ ಇರ್ರ್ಲಿ, ಆಗ್ದಾ?"
ಕಣ್ಣನ ಮುಖ ಬಣ್ಣ ಬದಲಿಸಿತು. ಆತ ದೃಷ್ಟಿ ತಗ್ಗಿಸಿ ನೆಲವನ್ನು ನೋಡಿದ.
"ಆಗಲಿ. ಅಮ್ಮನಿಗೆ ಹೇಳ್ತೇನೆ."
"ಹಾಗೆ ಮಾಡು.. ಇಲ್ಲದೆ ಹೋದರೆ ಅವಳು ಮರ್ಯಾದೆಯಿಂದ
ಬದುಕುವುದಕ್ಕೆ ಈ ಜನ ಖಂಡಿತ ಬಿಡೋದಿಲ್ಲ."
ಕಣ್ಣ ತಲೆಯೆತ್ತಿ ಮಾಸ್ತರನ್ನೇ ನೋಡಿದ. ತುಟಿಗಳು ಬಿಗಿದು ಅವನ ಮುಖ
ಬೀಗಿತು. ಆತ ಎದ್ದು ನಿಂತು ಹೊರಕ್ಕಿಳಿದ. ನಡಿಗೆಯಲ್ಲಿ ಆತುರ
ಇರಲಿಲ್ಲವಾದರೂ ಹೆಜ್ಜೆಗಳು ಭದ್ರವಾಗಿದ್ದುವು.
ಮಾಸ್ತರು ಎದ್ದು ಹಾಸಿಗೆ ಸುರುಳಿ ಸುತ್ತಿದರು. ಹುಡುಗರತ್ತ ನೋಡಿ ನಕ್ಕರು.
ಬಾಗಿ, ಅಪ್ಪುವಿನ ಬೆನ್ನಿಗೆ ಮೆಲ್ಲನೆ ಗುದ್ದಿ ಅಂದರು:
"ಏನೋಂತಿದ್ದೆ. ಅಂತೂ ಪರವಾಗಿಲ್ಲ ನೀನು!"
ಒಳಗಿನ ಎದೆಗುದಿಯೆಲ್ಲವೂ ಮಾಯವಾಗಿ, ಅಪ್ಪು ಉಲ್ಲಾಸಗೊಂಡ.
ಚಿರುಕಂಡನ ಮುಖದಲ್ಲೂ ಗೆಲವು ಮೂಡಿತು. ರಾತ್ರೆಯ ಘಟನೆಯನ್ನು ಮಾಸ್ತರಿಗೆ
ವಿವರಿಸಿ ಹೇಳಬೇಕೆಂಬ ಆಸೆಯಿಂದ ಅಪ್ಪು ಕೇಳಿದ:
"ಕಣ್ಣ ಎಲ್ಲಾ ಹೇಳಿದನಾ, ಸರ್?"
"ಹೂನಪ್ಪಾ ಆದರೇನು? --ನೀನೂ ಒಂದ್ಸಲ ಹೇಳೀಯಂತೆ. ನಾನು ಮುಖ
ತೊಳೆಯೋ ತನಕ ಕಾದಿರ್ರ್ಬೆಕು--ಅಷ್ಟೆ!" -
ಶಿಷ್ಯನಲ್ಲಿ ಸ್ವಂತದ ಸಾಧನೆಗಳನ್ನು ಬಣ್ಣಿಸುವ ಚಪಲ ಹೇರಳವಾಗಿತ್ತು
ಎಂಬುದು ಮಾಸ್ತರಿಗೆ ಚೆನ್ನಾಗಿ ಗೊತ್ತಿತ್ತು.
ಬಹುಶಃ ಚಿರುಕಂಡ ಊಹಿಸಿದಷ್ಟು ಪರಿಸ್ಥಿತಿ ಗಂಭೀರವಾಗಿರಲಾರದೆಂದು
ಅಪ್ಪು ಭಾವಿಸಿದ. ಆದರೆ ಆ ಭಾವನೆ ಬಲವಾಗುವುದಕ್ಕೆ ಮೊದಲೆ ಮಾಸ್ತರರೆಂದರು: