ಪುಟ:Chirasmarane-Niranjana.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೧೨೭

  "ಇಂಥದ್ದೆಲ್ಲ ನಾವು ನಿರೀಕ್ಷಿಸೋದುಕ್ಕೆ ಮುಂಚೆಯೇ ಬರ್ತದೆ.ಏನು ಮಾಡದೇ ಇರೋದು ಹೇಡಿತನ. ಮಾಡಿದ್ದೇನಾದರೂ ಅತಿಯಾದರೆ ಈವರೆಗಿನ ಕೆಲಸಕ್ಕೆಲ್ಲ ಧಕ್ಕೆ ಇದೊಳ್ಳೆ ಸಂದಿಗ್ಧ.".                                                                                           
   ಮತ್ತೆ ಹೃದಯ ವೇಗವಾಗಿ ಹೊಡೆದುಕೊಳ್ಳತೊಡಗಿ ಅಪ್ಪು  ಹೇಳಿದ: 
   "ಮುಂದೇನಾಯಿತು ಸರ್ ?”
   "ಈಗ್ಲೇ ಹ್ಯಾಗೆ ಹೇಳೋಣ? ಆದರೂ ಕಣ್ಣನನ್ನು ಅವರು ಸುಮ್ನೆ ಬಿಡೋದಿಲ್ಲ, ದೇವಕಿಗೆ ಆಶ್ರಯ ಕೊಟ್ಟಿದ್ದಕ್ಕೆ ಅವನಿಗೆ ಕಷ್ಟ ಒದಗಿಯೇ ಒದಗ್ತದೆ."
   ಮಾಸ್ತರು ಹೊರಹೋಗಿ ಒಂದು ಮಾವಿನೆಲೆ ತಂದು, ಅದನ್ನ ಸೀಳಿ ಸುರುಳಿ ಸುತ್ತಿ ಹಲುಜ್ಜಿದರು. ಅವರು ಹೇಳಿದುದೂ ಚಿರುಕಂಡ ಊಹಿಸಿದುದೂ ಹೆಚ್ಚುಕಡಿಮೆ ಒಂದೇ ಆಗಿದ್ದವು.
   ಮಾಸ್ತರು ಮುಖ ತೊಳೆದು ಬಂದಾಗ ಘಟನೆಯ ವರದಿ ಕೊಡುವ ಉತ್ಸಾಹವೇ ಅಪ್ಪುವಿಗಿರಲಿಲ್ಲ.ಆತನ ಮುಖ ಬಾಡಿತ್ತು.
    ಸ್ವಲ್ಪ ಹೊತ್ತು ಮಾಸ್ತರು ಸುಮ್ಮನಿದು ಹೇಳಿದರು: 
   "ಅನ್ಯಾಯವನ್ನು ಪ್ರತಿಭಟಿಸುವವರು ಈ ಹಳ್ಳಿಯಲ್ಲಿದ್ದಾರೆ ಅಂತ ಇನ್ನು ಜನಕ್ಕ ಗೊತ್ತಾಗ್ತದೆ. ನಿನ್ನೆ ನಡೆದ ವಿಷಯ ಬಹಿರಂಗವಾಗಿ ಯಾರೂ ಮಾತಾಡದೆ ಇರಬಹುದು.ಆದರೆ ಗುಟ್ಟಾಗಿ ಅದು,ಕಿವಿಯಿಂದ ಕಿವಿಗೆ ಸಂಚಾರ ಮಾಡಿಯೇ ಮಾಡೀತು. ಜನ, ಎದ್ದು ನಿಲ್ಲೋದೆ ಹೀಗೆ. ನಿನ್ನೇದು ವೈಯಕ್ತಿಕ ಪ್ರಶ್ನೆ, ಆದರೆ ಮುಂದೆ ಸಾಮೂಹಿಕ ಪ್ರಶ್ನೆ ಬಂದಾಗಲೂ ನಮ್ಮ ಜನ ಇಂಥದೇ ಧೈರ್ಯ ಸಾಹಸ ತೋರಿಸ್ಬೇಕು."
   ಹಿಂದಿನ ರಾತ್ರೆ ನಡೆದುದರ ವಿಷಯವಾಗಿ, 'ಇದು ಹೀಗೆ'ಇದು ಹಾಗೆ' ಎಂದು  ತೀರ್ಪುಕೊಟ್ಟು, ನಾಳೆ ನಡೆಯುವುದರ ಮುನ್ಸೂಚನೆಯನ್ನಿತ್ತ ಹಾಗಿತ್ತು,ಅವರ ಮಾತು.
   ಮತ್ತೊಂದು ಬೀಡಿ ಹಚ್ಚಿ ಮಾಸ್ತರೆಂದರು;
   "ಇನ್ನು ಹೋಗಿ, ಜಮೀನ್ದಾರರ ಕಡೆಯೋರು ಯಾರಾದರೂ ಬಂದರೂ ಬರಬಹುದು.ನೀವಿಲ್ಲಿ ಸಪ್ಪೆಮೋರೆ ಹಾಕಿ ನಿಂತಿರೋದು ಸರಿಯಲ್ಲ ಏನೂ ಆಗ್ದೆ ಇರೋಹಾಗೆ , ಏನೂ ಗೊತ್ತಿಲ್ದೆ ಇರೋರಹಾಗೆ, ಇದ್ಬಿಡಿ. ಸ್ವಲ್ಪ ಹೊತ್ತಾದೆಲೆ ಚಿರುಕಂಡ, ಹೋಟೆಲಿನ ಹತ್ತಿರ ಸುಮ್ನೆ ಹೋಗಿರು. ಜನ ಏನೇನು ಮಾತು ಆಡ್ತಾರೆ'ಅನ್ನೋದು ಗೊತ್ತಾಗ್ತದೆ.