ಪುಟ:Chirasmarane-Niranjana.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಚಿರಸ್ಮರಣೆ

 ಹುಡುಗರು ಹೊರಟುಹೋದರು, ಸೂರ್ಯ ನೆತ್ತಿಗೇರಿದ. ಅಪ್ಪು ತೇಜಸ್ವಿನಿಯ ತಣುಪು ನೀರಿನಲ್ಲಿ ಮೈಮರೆಯಲು ಹೋದ ಮೇಲೆ, ಚಿರುಕಂಡ ಜನ ಆಡುವ ಮಾತುಗಳಿಗೆ ಕಿವಿಗೊಡುತ್ತ ಸುತ್ತಾಡಿದ.

ನಂಬಿಯಾರರ ಆ ಚಾಕರ ದುರ್ನಡತೆಯವನೆಂದು ಕುಖ್ಯಾತನೇ ಆಗಿದ್ದ. ಹಿಂದಿನ ರಾತ್ರೆ ಯಾರ ಮನೆಗೊ ಹೋಗಿ ಆತ ಮಂಗಳಾರತಿ ಮಾಡಿಸಿಕೊಂಡನೆಂಬ ಸುದ್ದಿ ಹರಡಿತು. ಅದನ್ನು ಕೇಳುತ್ತ ಜನ ನಕ್ಕರು. ಆ ಮಾತುಕತೆಯಲ್ಲೆಲ್ಲ ನಂಬಿಯಾರರ ಪ್ರಸ್ತಾಪವೇ ಇರಲಿಲ್ಲ...

......ಮಾರನೆಯ ದಿನ ಅಲ್ಲಲ್ಲಿ ದೇವಕಿಯ ಹೆಸರು ಕೇಳಿಬಂತು. ನಗೆ ಮಾತು, ಪ್ರಶಾರ್ಥಕ ಚಿಹ್ನೆಯಾಗಿ ಗಂಟಿಕ್ಕಿದ ಹುಬ್ಬು, ಸಹಾನುಭೂತಿಯ ಧ್ವನಿ, ಬಳಿಕ ಅವರ ಸಂಭಾಷಣೆಯೊಳಗೆ ನುಸುಳಿಕೊಂಡ ಕಣ್ಣ, ಅರ್ಥಪೂರ್ಣ ನೋಟಗಳು. ಬೀಸಿದ್ದ ಬಿರುಗಾಳಿ ಶಮನವಾಗಿರಲಿಲ್ಲ, ಶಾಂತತೆ ನೆಲಸಿದ್ದಂತೆ ಕಂಡರೂ ಒಮ್ಮೆಲೆ ಗಾಳಿ ಗಿಡುಗನಂತೆ ಎರಗಿಬಂದು ತರಗೆಲೆಗಳನ್ನೆತ್ತಿಕೊಂಡು ಏರುವ ಹಾಗೆ, ಮಾತುಗಲು ಕೇಳಿ ಬಂದವು.

    ಜಮೀನ್ದಾರರಿಂದ ಮಾಸ್ತರಿಗೆ ಕರೆಬಂತು. ದೇವಕಿಯ ಹೆಸರನ್ನೇ ಎತ್ತದೆ ಅವರು ಹೇಳಿದರು:
     "ರಾತ್ರೆ ಹೊತ್ತು ನಮ್ಮ ಒಬ್ಬ ಆಳಿಗೆ ಕಣ್ಣ ಅಂತ ಯಾವನೋ ಹೊಡೆದನಂತೆ." ಅದೇ ಮೊದಲ ಬಾರಿ ಆ ವಿಷಯ ಕೇಳಿದವರಂತೆ ಮಾಸ್ತರೆಂದರು: 
     "ಹಾದೇನು?ಕಣ್ಣನೆ? ರಾತ್ರಿ ಶಾಲೆಗೆ ಕಣ್ಣ  ಅಂತ ಒಬ್ಬ ಬರ್ತಿರ್ತಾನೆ. ಯುವಕ." ನಂಬಿಯಾರರು ಮಾಸ್ತರ ಪ್ರಾಮಾಣಿಕತೆಯನ್ನು ತೂಗುವಂತೆ ಸೂಕ್ಷ್ಮ ನೋಟದಿಂದ ನೋಡಿದರು:
"ಅವನೇ ಈ ಕಯ್ಯೂರಿನಲ್ಲಿ ಬೇರೆ ಕಣ್ಣ ಯಾವನಿದ್ದಾನೆ?ನನಗೆ ಗೊತ್ತಿಲ್ವ?"
   "ಏನು ವಿಷಯ ಅಂತ ವಿಚಾರಿಸ್ತೇನೆ.
   "ನೀವೇನು ವಿಚಾರಿಸ್ತೀರಿ ಮಾಸ್ತರೆ? ವಿಚಾರಣೆ ಮಾಡೋದೆಲ್ಲ ನನಗೆ ಬಿಟ್ಬಿಡಿ. ಏನು ಕ್ರಮ ತಗೋಬೇಕು ಅನ್ನೋದನ್ನು ನಾನೇ ಇತ್ಯರ್ಥ ಮಾಡ್ತೇನೆ.  ನಿಮ್ಮ ರಾತ್ರಿ ಶಾಲೆಗೆ ಆತ ಬರ್ತಾ ಇರ್ತಾನಲ್ಲ -ಅದಕ್ಕೋಸ್ಕರ ಅವನ ವಿಷಯದಲ್ಲಿ ನಿಮಗಿಷ್ಟು ಎಚ್ಚರಿಕೆ ಹೇಳೋಣಾಂತ ಕರೆದೆ. ನೀವಿನ್ನು ಹೋಗ್ಬಹುದು." 
    ಸಂಭಾಷಣೆ ಚುಟುಕಾಗಿ ಮುಗಿದುದು ಅನಿರೀಕ್ಷಿತವಾಗಿತ್ತು.ಮಾಸ್ತರು ಎದ್ದು ನಿಂತರು.
    ಅವರು ಹೊರಡುತ್ತಿದ್ದಂತೆ ನಂಬಿಯಾರರು ಕೊನೆಯ ಮಾತೆಂದರು: