ಪುಟ:Chirasmarane-Niranjana.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಅವರೆಲ್ಲ ಪೋಲಿಗಳು. ಪೋಲಿಗಳ ಸಹವಾಸದಿಂದ ನಿಮಗೆ ತೊಂದರೆಯಾಗಬಾರ್ದು ಮಾಸ್ತರೆ.ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಾರ್ದು.ತಿಳಿತೇ?"

 ಗಂಟಲು ಒಣಗಿದ್ದರೂ ಮಾಸ್ತರು ಪ್ರಯತ್ನ ಪಟ್ಟು,"ಹೂಂ ಬರ್ತೇನೆ ನಮಸ್ಕಾರ"ಎಂದರು
     ಆನಂತರದ ನಾಲ್ಕಾರು ದಿನಗಳಲ್ಲೂ ಕಣ್ಣನಿಗೇನೂ ಆಗಲಿಲ್ಲ.ಅದೊಂದು ರೀತಿಯಲ್ಲಿ ಆಶ್ಚರ್ಯದ ವಿಷಯವಾಗಿತ್ತು.ತಮಗಾದ ಅವಮಾನವನ್ನು ನುಂಗಿಕೊಂಡು ನಂಬಿಯಾರರೆಂದೂ ಸುಮ್ಮನೆ ಕುಳಿತವರಲ್ಲ.ಈಗ ತಮಗೆ ಇದಿರಾದವನು ಒಬ್ಬ ವ್ಯಕ್ತಿ ಮಾತ್ರವಲ್ಲ ಎಂಬ ಅಸ್ಪಷ್ಟ ಭೀತಿಯೇ ದುಡುಕದಂತೆ ಅವರನ್ನು ತಡೆಹಿಡಿದಿರಬೇಕೆಂದು ಮಾಸ್ತರು ಯೋಚಿಸಿದರು.ಈಗ ಪ್ರತಿ ರಾತ್ರೆಯೂ ಅವರು ಕಾಣುತ್ತಿದ್ದುದು  ನಿರುತ್ಸಾಹಿಯಾದ ಕಣ್ಣನನ್ನು,ಲತನ ಮುಖ ನಿಸ್ತೇಜವಾಗಿರುತಿತ್ತು.
   ಆ ಹೃದಯದೊಳಗಿನ ಸಂಕಟವನ್ನು ಸ್ವಲ್ಪ ಮಟ್ಟಿಗೆ ಸರಿಯಾಗಿಯೇ ಊಹಿಸಿದ್ದರು.ಆದರೆ,ಅದಕ್ಕೆ ಇಂತಹದೇ ಪರಿಹಾರವೆಂದು ಬಾಯಿ ತೆರೆದು ಸಲಹೆ ಮಾಡಲು ಅವರು ಹಿಂಜರಿದರು
   ಆ ಹೃದಯದ ಗೊಂದಲವೇನೆಂಬುದನ್ನೂ ಆ ಮೆದುಳಿನಲ್ಲಿ ಸುಳಿಯುತಿದ್ದ ವಿಚಾರಗಳನ್ನೂ ಮೊದಲು ತಿಳಿದವನು ಅಪ್ಪು ,ಸ್ನಾನಕ್ಕೆಂದು ನದಿಗೆ ಹೋಗಿದ್ದ ಆತ,ಕಲ್ಲುಬಂಡೆಯ ಮೇಲೆ ಒಬ್ಬಂಟಿಗನಾಗಿಯೆ ಕುಳಿತಿದ್ದ ಕಣ್ಣನನ್ನು ಕಂಡ.ಇಬ್ಬರೂ ನೀರಿಗಿಳಿದು ಈಸಿದರು,ಮಿಂದರು ,ಆದರೆ ಮನದಣಿಯುವವರೆಗೂ  ನೀರಲ್ಲಿರಲು ಇಬ್ಬರಿಗೂ ಆಸಕ್ತಿ ಇರಲಿಲ್ಲ .ದಡವನ್ನೇರಿ ಅವರು ಬಿಸಿಲಲ್ಲಿ ಮೈ ಕಾಯಿಸಿದರು.
    ಕಣ್ಣನನ್ನೇ ದಿಟ್ಟಿಸಿ ಅಪ್ಪು ಕೇಳಿದ :
     "ಯಾಕೋ ಸಪ್ಪಗಿದ್ದೀಯಲ್ಲಣ್ಣ.?"
    ಆ ಪ್ರಶ್ನೆಗೆ ಉತ್ತರವಿರಲಿಲ್ಲ.ಆದರೆ ಸ್ವಲ್ಪ ಹೊತ್ತು ತಡೆದು ಕಣ್ಣ ಕೇಳಿದ:
     "ಮಾಸ್ತರು ನನ್ನ ವಿಷಯ ಏನದರೂ ಹೇಳಿದರಾ?"
     "ಇಲ್ವಲ್ಲ!"
     ಮತ್ತೂ ಮೌನ ಅಪ್ಪುವಿನ ಸಹನೆಯನ್ನು ಪರೀಕ್ಷಿಸಿತು.
     "ನಾನು ಈ ಊರು ಬಿಟ್ಟು ಹೋಗ್ಬೇಕೂಂತ ಮಾಡಿದ್ದೇನೆ ಅಪ್ಪು."
     ಅಪ್ಪು ನಿರೀಕ್ಷಿಸಿದುದಕ್ಕಿಂತಲೂ ಕೆಟ್ಟುದಾಗಿತ್ತು ಉತ್ತರ

. "ಯಾಕಣ್ಣ?"

     "ನಿನಗೆ ಗೊತ್ತಾಗಲ್ವ? ಇಲ್ಲಿರೋದು ಕಷ್ಟವಾಗ್ತದೆ.ಜನ ಏನೇನು