ಪುಟ:Chirasmarane-Niranjana.pdf/೧೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ೧೨
ಚಿರಸ್ಮರಣೆ
 

'ವಿಮೋಚನೆ'ಯಿಂದ ಮೊದಲುಗೊಂಡ ನನ್ನ ಕಾದಂಬರಿ ರಚನೆ 'ಬನಶಂಕರಿ'
'ರಂಗಮ್ಮನ ವಠಾರ'ಗಳಲ್ಲಿ ಕಲಾವಂತಿಕೆಯ ಒಂದು ಹಂತವನ್ನು ಮುಟ್ಟಿತು .
ಅದು ಶೀಘ್ರಪಯಣ.. ಹಣಕಾಸಿನ ಗಳಿಕೆ ಅಷ್ಟಕ್ಕಷ್ಟೇ ಇದ್ದರೂ ಓದುಗರ
ಒಲವನ್ನು ಹೇರಳವಾಗಿ ಸಂಪಾದಿಸಿದ್ದೆ.
ಒಂದು ವಸ್ತು ಒಳಗಿನಿಂದ ನನ್ನನ್ನು ಕುಟುಕುತ್ತಲೇ ಇತ್ತು.ಕಯ್ಯೂರು ರೈತರ
ಸಾವು ಬದುಕಿನ ಹೋರಾಟ.. ಕೆಲ ಗೆಳೆಯರೊಡನೆ ಆ ವಿಷಯ ಹೇಳಿಯೂ ಇದ್ದೆ.
ಐದಾರು ಕಾದಂಬರಿಗಳನ್ನು ಬರೆದು 'ಪ್ರಸಿದ್ಧ'ನಾಗಿದ್ದೆನಲ್ಲ? ಕಯ್ಯೂರಿನ
ಕಥೆಯನ್ನು ಬರೆಯಲು ಇದು ಸಕಾಲ ಎನಿಸಿತು."ಬರೆದುಬಿಡಿ" ಎಂದರು,
ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್ ನ ಜಿ.ಎಚ್.ರಾಮರಾಯರು
(ಪ್ರಗತಿಪರ ಕಾರ್ಯಕ್ರಮಗಳಿಗೆ ಮೊದಲಿನಿಂದಲೂ ಅವರು ಆಸರೆ).
ಪ್ರಕಾಶಕರಾಗಲು ಮೈಸೂರಿನ ಭಾರತೀ ಪ್ರಕಾಶನದ ಬಿ.ನರಸಿಂಗರಾಯರು ಮುಂದೆ
ಬಂದರು.
ಆಗ(1957)ನಾನು ವಾಸವಾಗಿದ್ಡುದು ಬೆಂಗಳೂರಿನ ವಿಲ್ಸನ್ ಗಾರ್ಡನಿನಲ್ಲಿ
,'ವೈವಾಹಿಕ ಬಂಧನ'ಕ್ಕೆ ಇನ್ನೂ ಒಳಗಾಗಿರಲಿಲ್ಲ, ಬರೆಯತೊಡಗಿದೆ.
ಹದಿನೆಂಟನೆಯ ದಿನ 'ಚಿರಸ್ಮರಣೆ ಮುಗಿಯಿತು.

'ಚಿರಸ್ಮರಣೆ' ಒಂದು ಕಾದಂಬರಿ.ಚರಿತ್ರೆಯಲ್ಲ.ಈ ಕೃತಿಯಲ್ಲಿ ನಾನು

ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಸ್ಸತ್ವವನ್ನು-ಆ ಕಾಲಾವಧಿಯ
ಚೇತನವನ್ನು-ಕಲೆಯನ್ನು ಸೆರೆಹಿಡಿಯುವ ಯತ್ನ.
'ಚಿರಸ್ಮರಣೆ'ಯ ಅನೇಕ ಪಾತ್ರಗಳು ನಿಜಜೀವನದಿಂದಲೇ ಕಾದಂಬರಿಯ
ಪುಟಗಳಿಗೆ ನಡೆದುಬಂದಿವೆ. ಆದರೆ ಇಲ್ಲಿನ ಪಾತ್ರನಿರ್ವಹಣೆಗಾಗಿ ರಂಗಸಜ್ಜಿಕೆಯ
ವೇಷಭೂಷಣಗಳನ್ನು ಅವು ನಿರಾಕರಿಸಿಲ್ಲ, ಇನ್ನು ಕೆಲಪಾತ್ರಗಳನ್ನು ನಾನು
ಕಡೆದದ್ದು ನನ್ನ ಕಲ್ಪನೆಯ ಮೂಸೆಯಲ್ಲಿ,
ರಚಿತವಾಗಿ ಇಪ್ಪತು ವರ್ಷಗಳಾದಮೇಲೆ 'ಚಿರಸ್ಮರಣೆ' ಮಲಯಾಳಂ
ಭಾಷೆಯಲ್ಲಿ ಮರುಹುಟ್ಟು ಪಡೆಯಿತು. ಕೇರಳದಲ್ಲಿ ಅದಕ್ಕೆ ದೊರೆತ ಸ್ವಾಗತದ
ವಿವರ ತಿಳಿದಾಗ 'ಧನ್ಯನಾದೆ' ಎನಿಸಿತು. ಸ್ವಲ್ಪ ಸಮಯದ ಅನಂತರ ಕನ್ನಡದಲ್ಲಿ
ಎರಡನೆಯ ಮುದ್ರಣ ಬಂತು. ಮುಂದೆ ತಮಿಳು, ತೆಲುಗು, ಮರಾಠಿ, ಬಂಗಾಳಿ,
ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗಳು ಬರತೊಡಗಿದುವು.