ಮಾಸ್ತರು ಹೇಳಿದರು:
"ಈಗ ನಿಮಗೊಂದು ಸಂತೋಷದ ವಿಷಯ ಹೇಳ್ತೇನೆ. ನಮ್ಮ ಶಾಲೆಯ ವಿದ್ಯಾರ್ಥಿ ಕಣ್ಣ ನಿಮಗೆಲ್ಲರಿಗೂ ಪರಿಚಿತಳೇ ಅಗಿರುವ ದೇವಕಿಯನ್ನು ಮದುವೆಯಾಗಲಿದ್ದಾರೆ. ಈ ಶುಭಕಾರ್ಯ ಅದಷ್ಟು ಬೇಗನೆ ಜರಗಿ ನಿಮಗೆಲ್ಲರಿಗೂ ಭೂರಿ ಭೋಜನ ಸಿಗುವಂತಾಗಲಿ ಅನ್ನೋದೆ ನಮ್ಮ ಹಾರೈಕೆ. ಅಲ್ಲವೇನ್ರಪ್ಪಾ? ಬೇರೇನು ಹೇಳೋಣ?"
ಕುಳಿತವರಿಂದ, ಪಿಸುಪಿಸು ಗುಜುಗುಜು ಮಾತು, ಮೆಚ್ಚುಗೆಯ ಉದ್ಗಾರಗಳು...
...ಒಂದು ಕಾಲದಲ್ಲಿ ಎಳೆಯ ಮಗುವನ್ನೆತ್ತಿಕೊಂಡು ತಾನೂ ಪಾಡು ಪಟ್ಟಿದ್ದ ಕಣ್ಣನ ವಿಧವೆ ತಾಯಿ ಮದುವೆಗೆ ಅಕ್ಷೇಪಿಸಲಿಲ್ಲ. ಗುಣವತಿಯಾದ ರೂಪವತಿಯಾದ ದೇವಕಿ ತನ್ನ ಸೊಸೆಯಾಗುವಳೆಂದು ಮುದುಕಿಗೆ ಹೆಮ್ಮೆಯೆ ಆಯಿತು.
ಮದುವೆ ಹೆಚ್ಚಿನ ವೆಚ್ಚವಿಲ್ಲದೆ ನಡೆಯಿತು. ಆ ಸಮಯದಲ್ಲಿ ಹಿರಿಯನಾಗಿ ಓಡಾಡಿದವನು ಚಿರುಕಂಡನ ತಂದೆ. ಒಂದು ಕಾಲದಲ್ಲಿ ಸಾಧುಪ್ರಾಣಿಯಾಗಿ ಮೂಕನಾಗಿರುತ್ತಿದ್ದ ಈತ, ಪುನರ್ಜನ್ಮ ಪಡೆದ ಹೊಸ ಮನುಷ್ಯನ ಹಾಗೆ ಲವಲವಿಕೆಯಿಂದಿದ್ದುದು, ಬೆರಗುಗೊಳಿಸುವ ಸಂಗತಿಯಾಗಿತ್ತು. ಜಮೀನ್ದಾರರ ಕೆಂಗಣ್ಣು ಉರಿಯುತ್ತಿದ್ದಂತೆಯೇ. ಅವರ ನಂಬುಗೆಯ ಚಾಕರ ತನ್ನ ಸೊಂಟವನ್ನಿನ್ನೂ ಮುಟ್ಟಿ ನೋಡುತ್ತಿದ್ದಂತೆಯೇ. ಕಣ್ಣ-ದೇವಕಿ ಗಂಡ-ಹೆಂಡತಿಯಾದರು. ಮಾಸ್ತರು ಮದುವೆಯ ಸಮಯದಲ್ಲಿ ಅತ್ತ ಸುಳಿಯದೇ ಇದ್ದರೂ, ರಾತ್ರಿ ಊಟಕ್ಕೆ ತಪ್ಪದೆ ಬಂದರು.
ಕಣ್ಣನ ಸೂಚನೆಯಂತೆ, ಮಾಸ್ತರ ಒಪ್ಪಿಗೆ ಪಡೆದು ಕೋರ, ತನ್ನ ಹಟ್ಟಿಯನ್ನು ಬಿಟ್ಟು, ಈಗ ತೆರವಾಗಿದ್ದ ದೇವಕಿಯ ಗುಡಿಸಲಿಗೆ ಬಂದು ನೆಲಸಿದ. ರಾತ್ರಿ ಶಾಲೆಗೆ ಬರುತ್ತಿದ್ದ ರೈತರು ಅಲ್ಲಿ ಇಲ್ಲಿ ಆ ಗುಡಿಸಲನ್ನು ದುರಸ್ತಿಪಡಿಸಿ ಮತ್ತಷ್ಟು ಭದ್ರಗೊಳಿಸಿದರು.
ಕಣ್ಣ ಕಯ್ಕೂರಿನವನಾಗಿಯೇ ಉಳಿದ. ಕೇಳಿ ಕಲಿತ, ಓದಿ ಕಲಿತ, ಹಳೆಯ ಹೊಸ ಹಾಡುಗಳೆಲ್ಲವನ್ನು ಈಗಲೂ ಆತನ ಚೇತನಕಂಠ ಹಾಡಿತು.
ಹಳ್ಳಿಯ ಹುಡುಗಿಯರು ಯುವತಿಯರು ದೇವಕಿಯದಾದ ಆ ಒಡವೆಯನ್ನು ಇನ್ನೂ ನೋಡಿದರು. ಆದರೆ ನೋಟದಲ್ಲೀಗ ಆಕ್ರಮಣದ ಆಕಾಂಕ್ಷೆ ಇರಲಿಲ್ಲ;
ಆಸೆ ಇರಲಿಲ್ಲ.