ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಕಾಲ ಎಂದಿನಂತೆ ಕಳೆಯಿತು. ರೈತರ ಪಾಲಿಗೆ ಅದು ಉರುಳುತ್ತಿದ್ದುದು ಒಂದೇ ಬಗೆಯಾಗಿ. ನಿಸರ್ಗದ ನಿಯಮದಂತೆ ಬಂದು ಹೋಗುತ್ತಿದ್ದ ಋತುಗಳು. ಋತುಗಳಿಗೆ ಅನುಗುಣವಾಗಿ ಉಳುಮೆ, ಬಿತ್ತನೆ, ಕುಯಿಲು, ಒಂದೋ ಹೆಚ್ಚು ಬೆಳೆ, ಇಲ್ಲಿ ಕಡಮೆ ಬೆಳೆ, ಸ್ವಲ್ಪ ಸುಖ, ಇಲ್ಲವೆ ಹೆಚ್ಚು ಸಂಕಟ. ಅವರಲ್ಲಿ ಬಹು ಜನರ ಸಾಮಾನ್ಯ ದೃಷ್ಟಿಗೆ ಕಾಣಿಸುತ್ತಿದ್ದುದು ನೀರಸವಾದ ಏರಿಳಿತವಿಲ್ಲದ ಬದುಕು. ಮನುಷ್ಯ ಹುಟ್ಟುತ್ತಾನೆ, ಬೆಳೆಯುತ್ತಾನೆ, ಸಾಯುತ್ತಾನೆ. ಹಿಂದೆಯೂ ಹಾಗಾಗುತ್ತಿತ್ತು. ಈಗಲೂ ಹಾಗಾಗುತ್ತಿದೆ. ಮುಂದೆಯೂ ಅಷ್ಟೆ. ಆದರೆ ಬೇರೆ ಕೆಲವರಿದ್ದರು. ಹೊಸ ವಿಚಾರಗಳ ಸಾಣೆಗೆ ಮೆದುಳನ್ನು ತೀಡಿ ನೋಡಿದವರು. ಬದುಕು ಯಾಕೆ ಹೀಗಿದೆ ಎಂಬುದು ಅವರಿಗೆ ತಿಳಿದಿತ್ತು. ಅದನ್ನು ಹಸನುಗೊಳಿಸಬೇಕೆಂಬ ಬಲವತ್ತರವಾದ ಆಸೆ ಆ ಜನಕ್ಕೆ. ಯಾವಾಗ ಹಾಗೆ ಮಾಡುವೆವೋ ಎಂಬ ತವಕ. ಕಾಲ ಬಲು ನಿಧಾನವಾಗಿ ಉರುಳುತ್ತಿದೆ, ಎಂದು ಅವರು ಆಕ್ಷೇಪಿಸುತ್ತಿದ್ದರು.

ಅಪ್ಪು ಮತ್ತು ಚಿರುಕಂಡ ಈಗ 'ಬರಿಯ ಪೋರರು' ಎಂದು ತಾತ್ಸಾರ ಮಾಡಬಹುದಾದ ಎಳೆಯರಲ್ಲ. ವರ್ಷವರ್ಷವೂ ಮಳೆಗಾಲದಲ್ಲಿ ಚಿಗುರಿ ಬಲಿತಹಾಗೆ ಅವರು ಬೆಳೆದಿದ್ದರು.

"ಹುಡುಗ ದೊಡ್ಡವನಾದ" ಎನ್ನುತ್ತಿದ್ದಳು ಕಲ್ಯಾಣಿ, ತೆಳ್ಳಗೆ ಎತ್ತರಕ್ಕೆ ಬೆಳೆದಿದ್ದ ಮಗ ಚಿರುಕಂಡನನ್ನು ನೋಡುತ್ತ. ಎಲ್ಲಾದರೂ ಹೆಣ್ಣು ನೋಡುತ್ತಿರಬೇಕು-ಎಂಬ ಪರೋಕ್ಷ ಸೂಚನೆಯೇ ಆ ಮಾತಿನ ಅರ್ಥ. ಆದರೆ ದಿನಹೋದಂತೆ ಎಳೆಯನಾಗುತ್ತ ನಡೆದಿದ್ದ ಆಕೆಯ ಗಂಡನಿಗೆ ಅದರ ಲಕ್ಷ್ಯವಿರಲಿಲ್ಲ.

ನೋಡಲು ಅಪ್ಪುವೇ ಕಟ್ಟಾಳು. ತಾಯಿ ಬ್ಯಾಟರಿಯನ್ನೂ ಕೊಡಿಸಿದ್ದಳು; ಚಪ್ಪಲಿಯನ್ನೂ ಕೊಡಿಸಿದ್ದಳು. ರಾತ್ರೆ ವಿಶೇಷ ಕೆಲಸವೇನೂ ಇಲ್ಲದೆ ಹೊರಹೋದಾಗ ಅಪ್ಪು ಬ್ಯಾಟರಿ ಉಪಯೋಗಿಸುತ್ತಿದ್ದ. ಮಂದ ಪ್ರಕಾಶದ ಒಂದು ಬ್ಯಾಟರಿ ಕಂಡೊಡನೆ ಅದು ಅಪ್ಪುವಿರಬೇಕೆಂದು ಊರವರ ನಂಬಿಕೆ. ಆದರೆ, ವಿಶಿಷ್ಟವಾದ ಯಾವುದಾದರೂ ಕೆಲಸಕ್ಕಾಗಿ ಹೊರಬಿದ್ದಾಗ ಅಪ್ಪು ಅದನ್ನು ಉಪಯೋಗಿಸುತ್ತಿರಲಿಲ್ಲ. ಗೋಪ್ಕ ಚಲನವಲನಕ್ಕೆ ಹಾಗಿರುವುದೇ ಅನುಕೂಲವಾಗಿತ್ತು. ಚಪ್ಪಲಿಯ ವಿಷಯದಲ್ಲೂ ಅಷ್ಟೆ. ಚಿರುಕಂಡನಿಗೆ ಇಲ್ಲದ್ದು ತನಗೆ ಯಾಕೆ? ಎಂದಿದ್ದ ಅಪ್ಪು. "ಹೆಚ್ಚು ಓಡಾಡುವವನು ನೀನೋ? ನಾನೋ?